ಚೆನ್ನೈ(ತಮಿಳುನಾಡು):ಮಾಜಿಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಗೆ ಉತ್ತರಿಸುವಾಗ ನ್ಯಾಯಾಂಗ ನಿಂದನೆ ಮಾಡಿದ್ದ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಜಿ.ಸಂಪತ್ ಕುಮಾರ್ ಅವರಿಗೆ ತಮಿಳುನಾಡಿನ ಮದ್ರಾಸ್ ಹೈಕೋರ್ಟ್ 15 ದಿನಗಳ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶಿಸಿತು. ಇದೇ ವೇಳೆ, ನ್ಯಾಯಾಲಯವು ಈ ಶಿಕ್ಷೆಯನ್ನು ಒಂದು ತಿಂಗಳ ಕಾಲ ಅಮಾನತಿನಲ್ಲಿರಿಸಿ, ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.
2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ಹಗರಣದಲ್ಲಿ ತಮ್ಮ ಹೆಸರು ಎಳೆದುತಂದ ಕಾರಣಕ್ಕಾಗಿ ಸಂಪತ್ ಕುಮಾರ್ ವಿರುದ್ಧ ಎಂ.ಎಸ್.ಧೋನಿ 2014ರಲ್ಲಿ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಅರ್ಜಿ ಹೂಡಿದ್ದರು. ಈ ಅರ್ಜಿಗೆ ಲಿಖಿತ ಉತ್ತರ ನೀಡುವಾಗ ಅಧಿಕಾರಿ ಸಂಪತ್ ಕುಮಾರ್ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಬಗ್ಗೆ ಅವಹೇಳನಕಾರಿ ಹೇಳಿಕೆ ಉಲ್ಲೇಖಿಸಿದ್ದಾರೆ ಎಂಬುದು ಆರೋಪ.
ಪ್ರಕರಣದ ಹಿನ್ನೆಲೆ: ಸಂಪತ್ ಕುಮಾರ್ 1997ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. 2013ರಲ್ಲಿ ತಮಿಳುನಾಡು ಪೊಲೀಸ್‌ನ 'ಕ್ಯೂ ಬ್ರಾಂಚ್'ನಲ್ಲಿ (ಆಂತರಿಕ ಭದ್ರತೆ) ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಬೆಟ್ಟಿಂಗ್ ಹಗರಣವನ್ನು ಬಯಲಿಗೆಳೆದಿದ್ದರು. ಬೆಟ್ಟಿಂಗ್ ಜೊತೆಗೆ ಫಿಕ್ಸಿಂಗ್, ಮೋಸದಾಟದಂತಹ ಇತರ ಕೃತ್ಯಗಳೊಂದಿಗೆ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರುಗಳೂ ಬೆಳಕಿಗೆ ಬಂದಿದ್ದವು.