ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಮಹತ್ವದ ಘೋಷಣೆಯೊಂದು ಮಾಡಿದ್ದಾರೆ. ಆಗಸ್ಟ್ 15ರಿಂದ ರಾಜ್ಯದಲ್ಲಿ ಒಂದು ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಚಾಲನೆ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.
ರಾಜಧಾನಿ ಭೋಪಾಲ್‌ನಲ್ಲಿ ಶನಿವಾರ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಎರಡು ದಿನಗಳ ಯುವ ಮಹಾಪಂಚಾಯತ್ (ಯುವ ಸಮಾವೇಶ) ಉದ್ಘಾಟಿಸಿ ಮಾತನಾಡಿದ ಸಿಎಂ ಚವ್ಹಾಣ್, ಒಂದು ಲಕ್ಷ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಆಗಸ್ಟ್ 15ರಂದು ಆರಂಭವಾಗಿ, ಒಂದು ವರ್ಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದೂ ತಿಳಿಸಿದರು.
ಪ್ರತಿ ತಿಂಗಳು ಉದ್ಯೋಗ ಮೇಳ:ನಿರುದ್ಯೋಗವು ಒಂದು ದೊಡ್ಡ ಸವಾಲಾಗಿದೆ. ಹೀಗಾಗಿ ತಮ್ಮ ಸರ್ಕಾರವು ಪ್ರತಿ ತಿಂಗಳು ಎರಡು ಲಕ್ಷ ಯುವಕರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ಇದಕ್ಕಾಗಿ ರಾಜ್ಯಾದ್ಯಂತ ಪ್ರತಿ ತಿಂಗಳು ಉದ್ಯೋಗ ಮೇಳಗಳನ್ನು ನಡೆಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಹಲವು ಹೊಸ ಯೋಜನೆಗಳೊಂದಿಗೆ ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸಲಾಗಿದ್ದು, ದೊಡ್ಡ ಪ್ರಮಾಣದ ಹೂಡಿಕೆಯೊಂದಿಗೆ ಸ್ಟಾರ್ಟ್‌ಅಪ್‌ಗಳು ಸ್ಥಾಪನೆಯಾಗಿವೆ. ಜೊತೆಗೆ ರಾಜ್ಯದಲ್ಲಿ ಲಿಂಗ ಅನುಪಾತ ಕಡಿಮೆಯಾಗುತ್ತಿದ್ದು, ಈಗ ಹೆಣ್ಣು ಮಗುವಿನ ಜನನವನ್ನು ಹೊರೆ ಎನ್ನುವುದಕ್ಕಿಂತ ಹೆಚ್ಚಾಗಿ ಪೋಷಕರು ವರ ಎಂದು ಪರಿಗಣಿಸುತ್ತಿದ್ದಾರೆ. 2012ರಲ್ಲಿ 1,000 ಗಂಡು ಮಕ್ಕಳಿಗೆ 912 ಹೆಣ್ಣುಮಕ್ಕಳು ಇದ್ದ ಲಿಂಗಾನುಪಾತ ಈಗ 1,000 ಗಂಡು ಮಕ್ಕಳಿಗೆ 978 ಹುಡುಗಿಯರ ಸಂಖ್ಯೆ ಹೆಚ್ಚಾಗಿದೆ ಎಂದು ವಿವರಿಸಿದರು.
ಆಜಾದ್ ಪ್ರತಿಮೆ ನಿರ್ಮಾಣ: ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಚಂದ್ರಶೇಖರ್ ಆಜಾದ್ 1906ರ ಜುಲೈ 23ರಂದು ಮಧ್ಯಪ್ರದೇಶದ ಅಲಿರಾಜ್‌ಪುರದ ಭಾವ್ರಾದಲ್ಲಿ ಜನಿಸಿದ್ದರು. ಜನರಲ್ಲಿ ಮತ್ತು ಯುವಕರಲ್ಲಿ ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಭೋಪಾಲ್‌ನಲ್ಲಿ ಆಜಾದ್ ಅವರ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದೂ ಸಿಎಂ ಚವ್ಹಾಣ್ ತಿಳಿಸಿದರು.
ಇದನ್ನೂ ಓದಿ:ಗೋವಾದಲ್ಲಿ ಸ್ಮೃತಿ ಇರಾನಿ ಪುತ್ರಿಯಿಂದ ಅಕ್ರಮ ಬಾರ್.. ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವೆ ಹೇಳಿದ್ದೇನು!?