ನವ ದೆಹಲಿ: ಸಂಚಾರ ದಟ್ಟಣೆ ನಮ್ಮ ದೇಶದ ಪ್ರಮುಖ ಸಮಸ್ಯೆಗಳಲ್ಲಿ ಒಂದು. ರಸ್ತೆಯ ಬದಿಯಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡುವುದು, ಮುರಿದ ಫುಟ್ಪಾತ್ಗಳು, ಇಕ್ಕಟ್ಟಾದ ರಸ್ತೆಗಳಿಂದಾಗಿ ಪ್ರತಿದಿನ ಸವಾರರು ಈ ಟ್ರಾಫಿಕ್ ಜಾಮ್ ಅನ್ನೋ ಕಿರಿಕಿರಿಯಲ್ಲಿ ಸಿಲುಕಿಕೊಳ್ಳಲೇಬೇಕು. ಅದರಲ್ಲೂ ಬೆಂಗಳೂರು ಮತ್ತು ಮುಂಬೈ ನಗರಗಳು ಕಳಪೆ ರಸ್ತೆ ನಿರ್ವಹಣೆಯಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಕುಖ್ಯಾತಿ ಪಡೆದಿವೆ.
ಆದರೆ ಇದರ ನಡುವೆ ಭಾರತದ ನಗರವೊಂದು ಅಚ್ಚುಕಟ್ಟಾಗಿ ಟ್ರಾಫಿಕ್ ನಿಭಾಯಿಸಿರುವ ಕಾರಣಕ್ಕೆ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಪ್ರಶಂಸೆ ಗಳಿಸುತ್ತಿದೆ. ಈಶಾನ್ಯ ರಾಜ್ಯ ಮಿಜೋರಾಂನ ಐಜ್ವಾಲ್ನ ನಗರದ ವಾಹನ ಸವಾರರು ಶಿಸ್ತಿನಿಂದ ಟ್ರಾಫಿಕ್ ಸಮಸ್ಯೆ ಬಾರದಂತೆ ವಾಹನ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.
ಎಲಿಜಬೆತ್ ಎನ್ನುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಿಜೋರಾಂನ ರಾಜಧಾನಿ ಐಜ್ವಾಲ್ನ ಸಿಟಿಯ ಟ್ರಾಪಿಕ್ನ ವಿಡಿಯೋ ಹಂಚಿಕೊಂಡಿದ್ದು, 'ಭಾರತದ ಏಕೈಕ ಸೈಲೆಂಟ್ ಸಿಟಿ' ಎಂದು ಟೈಟಲ್ ನೀಡಿದ್ದಾರೆ. ಭಾರತದಲ್ಲಿ ಅಚ್ಚರಿಯೋ ಎಂಬಂತೆ, ವಿಡಿಯೋದಲ್ಲಿ ರಸ್ತೆಯ ಬಲಭಾಗಕ್ಕೆ ಕಾರುಗಳು ಸಾಲಾಗಿ ನಿಂತಿವೆ. ಅದೇ ರಸ್ತೆಯ ಇನ್ನೊಂದು ಪಕ್ಕದಲ್ಲಿ ಕಾರುಗಳು ಯಾವುದೇ ಹಾರ್ನ್ ಹಾಕದೇ ತಮ್ಮ ಮುಂದಿನ ಕಾರುಗಳನ್ನು ಓವರ್ಟೇಕ್ ಮಾಡದೇ ತಾಳ್ಮೆಯಿಂದ ಸಾಲಾಗಿ ಸಾಗುತ್ತಿವೆ.
ಪ್ರತ್ಯೇಕವಾಗಿ ಯಾವುದೇ ಲೇನ್ ಗುರುತಿಸದೇ ಇದ್ದರೂ ಇನ್ನೊಂದು ಪಕ್ಕದಲ್ಲಿ ದ್ವಿಚಕ್ರ ವಾಹನ ಸವಾರರು ತಮ್ಮದೇ ಲೇನ್ ನಿರ್ಮಿಸಿಕೊಂಡು ಸಾಗುತ್ತಿದ್ದಾರೆ. ಬಹುತೇಕ ಸವಾರರು ಹೆಲ್ಮೆಟ್ಧಾರಿಗಳಾಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ರೀತಿ ಶಿಸ್ತಿನಿಂದ ಟ್ರಾಫಿಕ್ ಜಾಮ್ ಆಗದ ರೀತಿ ವಾಹನಗಳು ಸಾಗುತ್ತಿರುವುದನ್ನು ನೋಡಿದ ಅನೇಕರು ಆಶ್ಚರ್ಯಗೊಂಡಿದ್ದು, ಸವಾರರ ಶಿಸ್ತಿಗೆ ಶಹಬಾಸ್ಗಿರಿ ನೀಡಿದ್ದಾರೆ. ನವೆಂಬರ್ 24 ರಂದು ಹಂಚಿಕೊಂಡ ವಿಡಿಯೋ ಐದು ಮಿಲಿಯನ್ ವೀಕ್ಷಣೆ ಕಂಡಿದ್ದು, ಎರಡು ಲಕ್ಷ ಲೈಕ್ ಗಿಟ್ಟಿಸಿಕೊಂಡಿದೆ.