ಪಲ್ನಾಡು(ಆಂಧ್ರಪ್ರದೇಶ):ಒಂದೆಡೆ ಜನನ.. ಇನ್ನೊಂದೆಡೆ ಮರಣ.. ಈ ಎರಡು ಘಟನೆಗಳು ಒಂದೇ ದಿನ ಒಂದೇ ಕುಟುಂಬದಲ್ಲಿ ನಡೆದಿವೆ. ಮಗು ಜನಿಸಿದ್ದಕ್ಕೆ ಸಂಭ್ರಮಿಸಬೇಕಿದ್ದ ಕುಟುಂಬಕ್ಕೆ ಮಗುವಿನ ತಂದೆ ಶವವಾಗಿ ಅದೇ ಆಸ್ಪತ್ರೆಯ ಬೆಡ್ ಮೇಲಿರುವುದು ಆಕಾಶವೇ ತಲೆಮೇಲೆ ಕಳಚಿ ಬಿದ್ದಂತಾಗಿದೆ. ಆಂಧ್ರಪ್ರದೇಶದಲ್ಲಿ ಈ ಕರುಳು ಹಿಂಡುವ ಕರುಣಾಜನಕ ಘಟನೆ ನಡೆದಿದೆ. ಒಂದೇ ಆಸ್ಪತ್ರೆಯಲ್ಲಿ ಮಗು ಜಗತ್ತನ್ನು ನೋಡಲು ಕಣ್ಣು ತೆರೆಯುವಷ್ಟರಲ್ಲಿ ತನ್ನ ಪ್ರಪಂಚವಾಗಿರಬೇಕಾದ ಅಪ್ಪ ಕೊನೆಯುಸಿರೆಳೆದಿದ್ದಾರೆ.
ಹೌದು, ಒಂದೆಡೆ ಆರೋಗ್ಯ ಶ್ರೀ, ಜಗನಣ್ಣಶ್ರೀ ಆರೋಗ್ಯ ಸುರಕ್ಷಾ ಯೋಜನೆಗಳು ಇದ್ದು ಬಡವರಿಗೆ ಆಸರೆಯಾಗುತ್ತಿದೆ ಎಂದು ಸರ್ಕಾರದ ಮುಖಂಡರು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಇಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸೌಲಭ್ಯವೇ ಇಲ್ಲದಂತಾಗಿದೆ. ತುಂಬು ಗರ್ಭಿಣಿ ರಾತ್ರೋರಾತ್ರಿ ಹೆರಿಗೆಗೆ ಮೂರು ಮೂರು ಆಸ್ಪತ್ರೆಗೆ ತಿರುಗುವ ಅವ್ಯವಸ್ಥೆ ಉಂಟಾಗಿದೆ.
ನಡೆದಿದ್ದೇನು?: ಕಾರಂಪುಡಿಯ ಬತ್ತಿನ ಆನಂದ್ ಅವರ ಪತ್ನಿ ರಾಮಾಂಜಿನಿ ತುಂಬು ಗರ್ಭಿಣಿಯಾಗಿದ್ದು, ಅವರಿಗೆ ಶುಕ್ರವಾರ ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡಿತ್ತು. ರಾತ್ರಿ 9 ಗಂಟೆಗೆ ಆನಂದ ತನ್ನ ಪತ್ನಿಯನ್ನು ಆಶಾ ಕಾರ್ಯಕರ್ತೆಯರ ಜತೆ ಕಾರಂಪುಡಿ ಪಿಎಚ್‌ಸಿ(ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ) ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ವೈದ್ಯರಿಲ್ಲದ ಕಾರಣ ಗುರಜಾಲ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು. 108 ಆಂಬ್ಯುಲೆನ್ಸ್ ನಲ್ಲಿ 20 ಕಿ.ಮೀ ದೂರದ ಗುರಜಾಲ ಆಸ್ಪತ್ರೆಗೆ ಬಂದರು. ಇಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಮ್ನಿಯೋಟಿಕ್ ದ್ರವ ಕಡಿಮೆಯಾಗಿದ್ದು, ರಕ್ತಹೀನತೆ ಕಂಡು ಬಂದಿದ್ದರಿಂದ ಉತ್ತಮ ಚಿಕಿತ್ಸೆಗಾಗಿ ನರಸರಾವ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು.