ಕರ್ನಾಟಕ

karnataka

ETV Bharat / bharat

ರಾಜಕೀಯದಲ್ಲಿ ಧರ್ಮ ಬಳಕೆ ನಿಲ್ಲಿಸಿದ ಕ್ಷಣ, ದ್ವೇಷ ಭಾಷಣಕ್ಕೆ ಕೊನೆ: ಸುಪ್ರೀಂಕೋರ್ಟ್​

ರಾಜಕಾರಣಿಗಳು ರಾಜಕೀಯದಲ್ಲಿ ಧರ್ಮವನ್ನು ಬಳಸುವುದನ್ನು ನಿಲ್ಲಿಸಿದ ಕ್ಷಣ, ದ್ವೇಷ ಭಾಷಣಗಳು ಕೊನೆಗೊಳ್ಳುತ್ತವೆ ಎಂದು ಎಂದು ಸುಪ್ರೀಂಕೋರ್ಟ್​ ಹೇಳಿದೆ.

moment-politicians-stop-using-religion-in-politics-hate-speeches-will-end-sc
ರಾಜಕೀಯದಲ್ಲಿ ಧರ್ಮ ಬಳಕೆ ನಿಲ್ಲಿಸಿದ ಕ್ಷಣ, ದ್ವೇಷದ ಭಾಷಣಕ್ಕೆ ಕೊನೆ: ಸುಪ್ರೀಂಕೋರ್ಟ್​

By

Published : Mar 29, 2023, 11:06 PM IST

ನವದೆಹಲಿ: ದ್ವೇಷದ ಭಾಷಣಗಳ ವಿಷಯವಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್​ ಸೂಚಿಸಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ದ್ವೇಷ ಭಾಷಣಗಳನ್ನು ನಿಯಂತ್ರಿಸಲು ವಿಫಲವಾದ ಕಾರಣಕ್ಕಾಗಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಿಚಾರಣೆ ನಡೆಸಿ, ಮಹಾರಾಷ್ಟ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

ಕಳೆದ ನಾಲ್ಕು ತಿಂಗಳಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಕನಿಷ್ಠ 50 ರ‍್ಯಾಲಿ ನಡೆದಿದ್ದು, ಇದರಲ್ಲಿ ದ್ವೇಷ ಭಾಷಣಗಳನ್ನು ಮಾಡಲಾಗಿದೆ" ಎಂಬ ಸುದ್ದಿ ವರದಿಯ ಮೇಲೆ ಕೇರಳ ಮೂಲದ ಶಾಹೀನ್ ಅಬ್ದುಲ್ಲಾ ಎಂಬುವವರು ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ನೇತೃತ್ವದ ನ್ಯಾಯ ಪೀಠವು ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದೆ. ಇದೇ ವೇಳೆ ಹಿಂದೂಗಳ ವಿರುದ್ಧ ದ್ವೇಷಪೂರಿತ ಭಾಷಣಗಳನ್ನು ಮಾಡಿದ ಘಟನೆಗಳನ್ನು ಉಲ್ಲೇಖಿಸಿ ಹಿಂದೂ ಸಮಾಜ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ. ಏಪ್ರಿಲ್ 28ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಚಾಟಿ ಬೀಸಿದ ನ್ಯಾಯಪೀಠ: ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ವೇಳೆ ನ್ಯಾಯಪೀಠವು ಚಾಟಿ ಬೀಸಿದೆ. ''ಅತ್ಯಂತ ಮುಖ್ಯವಾಗಿರುವುದು ಘನತೆ. ಆದರೆ, ಪಾಕಿಸ್ತಾನಕ್ಕೆ ಹೋಗಿ ಎಂದು ಕೆಲ ಹೇಳಿಕೆಗಳನ್ನು ನೀಡಲಾಗುತ್ತಿದೆ. ಅವರು ನಿಜವಾಗಿಯೂ ಈ ದೇಶವನ್ನು ಆರಿಸಿಕೊಂಡವರು. ಅವರು ನಿಮ್ಮ ಸಹೋದರರು ಮತ್ತು ಸಹೋದರಿಯರು'' ಎಂದು ಹಿಂದೂ ಸಮಾಜದ ವಕೀಲರಿಗೆ ನ್ಯಾಯಮೂರ್ತಿಗಳು ತಿಳಿಸಿದರು.

ಅಲ್ಲದೇ, ''ನಾವೆಲ್ಲರೂ ಒಂದು ಪರಂಪರೆಯನ್ನು ಹೊಂದಿದ್ದೇವೆ. ಸಹಿಷ್ಣುತೆ ಎಂದರೇನು?, ಸಹಿಷ್ಣುತೆ ಎಂದರೆ ಯಾರೊಂದಿಗಾದರೂ ಸಹಿಸುವುದಿಲ್ಲ. ಬದಲಿಗೆ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವುದು... ನೀವು ಸೂಪರ್ ಪವರ್ ಆಗಬೇಕಾದರೆ ಕಾನೂನಿನ ನಿಯಮ ಹೊಂದಿರಬೇಕು'' ಎಂದು ನ್ಯಾಯಪೀಠ ಹೇಳಿತು.

ಅಷ್ಟೇ ಅಲ್ಲ, "ನಾವು ಎಲ್ಲಿಗೆ ಹೋಗುತ್ತಿದ್ದೇವೆ?, ನಮ್ಮಲ್ಲಿ ಪಂಡಿತ್ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಂತಹ ವಾಗ್ಮಿಗಳಿದ್ದರು. ಗ್ರಾಮೀಣ ಪ್ರದೇಶದ ಜನರು ಅವರ ಭಾಷಣಗಳನ್ನು ಕೇಳಲು ಬರುತ್ತಿದ್ದರು. ಈಗ ಯಾವುದೇ ವಿಷಯ ಹೊಂದಿರದ ಜನರು ಭಾಷಣಗಳನ್ನು ಮಾಡುತ್ತಿದ್ದಾರೆ. ಹಾಗೆ ನೋಡಿದರೆ ನಾವು ಎಷ್ಟು ಜನರ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮವನ್ನು ತೆಗೆದುಕೊಳ್ಳಬಹುದು. ಅಸಹಿಷ್ಣುತೆ ಜ್ಞಾನ ಮತ್ತು ಶಿಕ್ಷಣದ ಕೊರತೆಯಿಂದ ಇಂತಹ ಹೇಳಿಕೆಗಳು ಬರುತ್ತಿವೆ ಎಂದು'' ಅಸಮಾಧಾನ ವ್ಯಕ್ತಪಡಿಸಿದರು.

ಮುಂದುವರೆದು, ''ಭ್ರಾತೃತ್ವದ ಅರ್ಥದಲ್ಲಿ ಈಗ ಬಿರುಕುಗಳು ಬರುತ್ತಿವೆ ಎಂದು ಹೇಳಲು ವಿಷಾದಿಸುತ್ತೇವೆ. ರಾಜಕಾರಣಿಗಳು ರಾಜಕೀಯದಲ್ಲಿ ಧರ್ಮವನ್ನು ಬಳಸುವುದನ್ನು ನಿಲ್ಲಿಸಿದ ಕ್ಷಣ, ದ್ವೇಷ ಭಾಷಣಗಳು ಕೊನೆಗೊಳ್ಳುತ್ತವೆ. ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕಿಸಿದಾಗ ಇದೆಲ್ಲವೂ ನಿಲ್ಲುತ್ತದೆ'' ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು. ಇದೇ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಮಿಳುನಾಡು ಮತ್ತು ಕೇರಳದ ದ್ವೇಷ ಭಾಷಣಗಳ ನಿದರ್ಶನಗಳನ್ನು ಪ್ರಸ್ತಾಪಿಸಿದರು. ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ವಿರುದ್ಧ ದ್ವೇಷ ಭಾಷಣಗಳ ಕೆಲ ಹೇಳಿಕೆಗಳನ್ನೂ ಉಲ್ಲೇಖಿಸಿದರು. ಅರ್ಜಿದಾರ ಅಬ್ದುಲ್ಲಾ ತಮ್ಮ ರಾಜ್ಯದಲ್ಲಿನ ದ್ವೇಷ ಭಾಷಣಗಳನ್ನೂ ನ್ಯಾಯಾಲಯದ ಮುಂದೆ ತರಬೇಕಿತ್ತು ಎಂದು ಮೆಹ್ತಾ ಪ್ರತಿಪಾದಿಸಿದರು.

ಇದನ್ನೂ ಓದಿ:ಬಾಲ್ಯದಲ್ಲಿ ಇಬ್ಬರು ಪುರುಷರಿಂದ ಎದುರಾದ ಸಂಕಷ್ಟದ ಬಗ್ಗೆ ಹೇಳಿಕೊಂಡ ಜಿಲ್ಲಾಧಿಕಾರಿ..

ABOUT THE AUTHOR

...view details