ಇಂಫಾಲ (ಮಣಿಪುರ):ಈಶಾನ್ಯ ರಾಜ್ಯದ ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ. ಇಂಫಾಲ ಪೂರ್ವ ಜಿಲ್ಲೆಯ ಚಿಂಗಾರೆಲ್‌ನಲ್ಲಿ ಸಚಿವ ಎಲ್. ಸುಸಿಂದ್ರೋ ಮೈತೆಯ್ ಅವರಿಗೆ ಖಾಸಗಿ ಗೋಡೌನ್‌ಗೆ ಜನಸಮೂಹ ಬೆಂಕಿ ಹಚ್ಚಿದೆ. ಇದರಿಂದ ಇತರ ವಸ್ತುಗಳ ಜೊತೆಗೆ ಸುಮಾರು 120 ಕೋಟಿ ರೂಪಾಯಿ ಮೌಲ್ಯದ ಪ್ಲಾಸ್ಟಿಕ್ ಪೈಪ್‌ಗಳು ಸುಟ್ಟು ಹೋಗಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಸಚಿವರ ಗೋಡೌನ್‌ಗೆ ಗುಂಪೊಂದು ಬೆಂಕಿ ಹಚ್ಚಿದೆ. ಇದಾದ ನಂತರ ಅದೇ ಗುಂಪು ಇಂಫಾಲ ಪೂರ್ವ ಜಿಲ್ಲೆಯ ಖುರೈನಲ್ಲಿರುವ ಸಚಿವರ ನಿವಾಸದ ಮೇಲೂ ದಾಳಿ ಮಾಡಲು ಪ್ರಯತ್ನಿಸಿತ್ತು. ಈ ವೇಳೆ ಭದ್ರತಾ ಪಡೆಗಳ ಸಮಯೋಚಿತ ಮಧ್ಯಪ್ರವೇಶದಿಂದಾಗಿ ದಾಳಿಯನ್ನು ತಡೆಯಲಾಯಿತು. ಈ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಶುಕ್ರವಾರ ಮಧ್ಯರಾತ್ರಿಯವರೆಗೆ ಹಲವಾರು ಸುತ್ತಿನ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಬೇಕಾಯಿತು. ಆದರೆ, ಈಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಲ್. ಸುಸಿಂದ್ರೋ ಮೈತೆಯ್ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್, ಗ್ರಾಹಕ ವ್ಯವಹಾರಗಳು, ಆಹಾರ ಇಲಾಖೆಗಳ ಖಾತೆಯನ್ನು ಹೊಂದಿದ್ದಾರೆ. ಈ ಘಟನೆ ಬಗ್ಗೆ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವ ಸೇರಿ ಹಲವರ ಮನೆಗೆ ಬೆಂಕಿ: ಈ ಮೊದಲು ಗುಂಪುಗಳು ಹಲವಾರು ಸಚಿವರು, ಶಾಸಕರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ನಿವಾಸಗಳಿಗೂ ಬೆಂಕಿ ಹಚ್ಚಿದ್ದವು. ಪ್ರಮುಖವಾಗಿ ಕೇಂದ್ರ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್, ಮಣಿಪುರದ ಏಕೈಕ ಮಹಿಳಾ ಸಚಿವೆ ನೆಮ್ಚಾ ಕಿಪ್‌ಗೆನ್ ಮತ್ತು ಪಿಡಬ್ಲ್ಯೂಡಿ ಸಚಿವ ಕೊಂತೌಜಮ್ ಗೋವಿಂದಾಸ್, ಉರಿಪೋಕ್ ಕ್ಷೇತ್ರದ ಶಾಸಕ ರಘುಮಣಿ ಸಿಂಗ್, ಸುಗ್ನೂ ಶಾಸಕ ಕೆ. ರಂಜಿತ್ ಸಿಂಗ್ ಮತ್ತು ನವೋರಿಯಾ ಪಖಾಂಗ್ಲಾಕ್ಪಾ ಶಾಸಕ ಎಸ್. ಕೆಬಿ ದೇವಿ ಮನೆಗಳಿಗೆ ಉದ್ರಿಕ್ತ ಗುಂಪುಗಳು ಬೆಂಕಿ ಹಚ್ಚಿದ್ದವು.
ಇಂಫಾಲ್ ಪೂರ್ವ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಬಂಡುಕೋರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿಯ ಘಟನೆಗಳು ವರದಿಯಾಗುತ್ತಲೇ ಇವೆ. ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರವಾಗಿ ಮೈತಿಯಿ ಮತ್ತು ಬುಡಕಟ್ಟು ಜನಾಂಗದ ಕುಕಿ ಸಮುದಾಯಗಳ ಕಳೆದ ಒಂದು ತಿಂಗಳಿಂದ ಹಿಂಸಾಚಾರ ಭುಗಿಲೆದ್ದಿದೆ. ಈ ಜನಾಂಗೀಯ ಸಂಘರ್ಷದಲ್ಲಿ ಇದುವರೆಗೆ ಸುಮಾರು ನೂರು ಜನರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮಣಿಪುರ ಬಿಕ್ಕಟ್ಟನ್ನು ಕೊನೆಗೊಳಿಸಲು ಎಲ್ಲ ಸಚಿವರು ಮತ್ತು ಶಾಸಕರು ಶ್ರಮಿಸುತ್ತಿಲ್ಲ ಎಂದು ಜನಸಮೂಹ ಆಕ್ರೋಶಗೊಂಡಿದೆ.
ಇದನ್ನೂ ಓದಿ:ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ.. ಶಾ ನೇತೃತ್ವದಲ್ಲಿ ಇಂದು ಸರ್ವಪಕ್ಷ ಸಭೆ.. ಪ್ರಧಾನಿ ಮೌನದ ಬಗ್ಗೆ ರಾಹುಲ್ ಟೀಕಾಪ್ರಹಾರ