ಚೆನ್ನೈ (ತಮಿಳುನಾಡು): ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ರಾಜಕೀಯ ಪಕ್ಷ ಸ್ಥಾಪನೆಯಿಂದ ಹಿಂದೆ ಸರಿಯುವುದಾಗಿ ರಜನಿಕಾಂತ್ ಘೋಷಿಸಿದ್ದರಿಂದ ನನಗೂ ನಿರಾಶೆಯಾಗಿದೆ ಎಂದು ಮಕ್ಕಳ್ ನೀಧಿ ಮಯ್ಯಮ್ ಪಕ್ಷದ (ಎಂಎನ್‌ಎಂ) ಮುಖ್ಯಸ್ಥ ಕಮಲ್ ಹಾಸನ್ ಹೇಳಿದ್ದಾರೆ.
ಅಧಿಕ ರಕ್ತದೊತ್ತಡದಿಂದ ಹೈದರಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೂಪರ್ ಸ್ಟಾರ್ ರಜನಿಕಾಂತ್, ಆಸ್ಪತ್ರೆಯಿಂದ ಬಿಡುಗಡೆಯಾದ ಮರು ದಿನ ರಾಜಕೀಯ ಪಕ್ಷ ಸ್ಥಾಪನೆಯ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.
"ನನ್ನ ಚುನಾವಣಾ ಪ್ರಚಾರದ ನಂತರ ನಾನು ಮತ್ತೆ ರಜನಿಕಾಂತ್ ಅವರನ್ನು ಭೇಟಿಯಾಗುತ್ತೇನೆ. ಅವರ ಅಭಿಮಾನಿಗಳಂತೆ ನನಗೂ ನಿರಾಶೆಯಾಗಿದೆ. ಆದರೆ ಅವರ ಆರೋಗ್ಯ ನನಗೆ ಮುಖ್ಯವಾಗಿದೆ. ಅವರು ಆರೋಗ್ಯವಾಗಿರಬೇಕು ಮತ್ತು ಚೆನ್ನಾಗಿರಬೇಕು" ಎಂದು ಕಮಲ್ ಹಾಸನ್ ನಾಗಪಟ್ಟಣಂ ಜಿಲ್ಲೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.