ಚೆನ್ನೈ(ತಮಿಳುನಾಡು): ಹಿಂದಿ ಯಾವುದೇ ಭಾಷೆಗಳಿಗೆ ಪ್ರತಿಸ್ಪರ್ಧಿಯಲ್ಲ. ದೇಶದ ಇತರ ಎಲ್ಲಾ ಪ್ರಾದೇಶಿಕ ಭಾಷೆಗಳ 'ಸ್ನೇಹಿತ'ನಿದ್ದಂತೆ. ಭಾಷೆಗಳ ಬೆಳವಣಿಗೆಯು ಪರಸ್ಪರ ಅವಲಂಬಿತವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಹೇಳಿದ್ದರು. ಈ ವಿಚಾರವಾಗಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ 'ಭಾರತವನ್ನು ಹಿಂದಿಯಾ ಮಾಡುವ ಪ್ರಯತ್ನ ನಿಲ್ಲಿಸಿ' (Stop Attempts To Make India Hindia) ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:"ಹಿಂದಿ ಎಲ್ಲ ಭಾಷೆಗಳ ಸ್ನೇಹಿತ, ಮಾತೃಭಾಷೆ ಜೊತೆ ಹಿಂದಿ ಬಳಸುವ ಪ್ರತಿಜ್ಞೆ ಮಾಡಿ" ಎಂದ ಅಮಿತ್ ಶಾ
'ಭಾರತೀಯ ಭಾಷಾ ದಿನ ಆಚರಿಸಬೇಕು': ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳೂ ಕೂಡಾ ಸರ್ಕಾರದ ಅಧಿಕೃತ ಭಾಷೆಗಳೆಂದು ಎಂದು ಘೋಷಿಸಿ. ಹಿಂದಿ ರಾಷ್ಟ್ರ ಭಾಷೆ ಅಥವಾ ಏಕೈಕ ಅಧಿಕೃತ ಭಾಷೆ ಅಲ್ಲ. ನಾವು ಹಿಂದಿ ದಿವಸ್ ಬದಲಿಗೆ ಭಾರತೀಯ ಭಾಷಾ ದಿನ ಆಚರಿಸಬೇಕು ಎಂದು ಸ್ಟಾಲಿನ್ ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಹಿಂದಿ ಹಾಗೂ ಇತರೆ ಭಾಷೆಗಳ ಅಭಿವೃದ್ಧಿಗೆ ಖರ್ಚು ಮಾಡುವುದರಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವಿದೆ. NEP (ರಾಷ್ಟ್ರೀಯ ಶಿಕ್ಷಣ ನೀತಿ)ಯ ಮೂಲಕ ಹಿಂದಿ ಮತ್ತು ಸಂಸ್ಕೃತವನ್ನು ಜನರ ಮೇಲೆ ಹೇರುವ ಕೆಲಸವಾಗುತ್ತಿದೆ. ದೇಶದಲ್ಲಿ ಹಿಂದಿ ಹೇರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಹಿಂದಿ ಪರಿಚಯಿಸುವ ಕೇಂದ್ರದ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದರು.
ಅಮಿತ್ ಶಾ ಹೇಳಿದ್ದೇನು?: 'ಕೆಲವರು ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಸ್ಪರ್ಧಿಗಳು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದಿ ದೇಶದ ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಾಗಲು ಸಾಧ್ಯವಿಲ್ಲ. ಹಿಂದಿ ದೇಶದ ಎಲ್ಲಾ ಭಾಷೆಗಳ ಸ್ನೇಹಿತ' ಎಂದು ಸೂರತ್ನಲ್ಲಿದ ನಡೆದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಹೇಳಿದ್ದರು.
ದೇಶವಾಸಿಗಳು ತಮ್ಮ ಮಾತೃಭಾಷೆಯ ಜೊತೆಗೆ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಕ್ರಮೇಣವಾಗಿ ಬಳಸುವ ಪ್ರತಿಜ್ಞೆ ತೆಗೆದುಕೊಳ್ಳಬೇಕೆಂದು ಮನವಿ ಮಾಡುತ್ತೇನೆ. ಮಾತೃಭಾಷೆ ಹಾಗೂ ಅಧಿಕೃತ ಭಾಷೆಯ ಸಮನ್ವಯದಲ್ಲಿ ಭಾರತದ ಅಭಿವೃದ್ಧಿ ಅಡಗಿದೆ ಎಂದು ಶಾ ಅಭಿಪ್ರಾಯಪಟ್ಟಿದ್ದರು.