ಸಿಲಿಗುರಿ(ಪಶ್ಚಿಮ ಬಂಗಾಳ):ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಮತ್ತೊಮ್ಮೆ ಕಲ್ಲು ತೂರಾಟ ನಡೆಸಿದ ಘಟನೆ ಸಿಲಿಗುರಿಯಿಂದ ವರದಿಯಾಗಿದೆ. ಶುಕ್ರವಾರ ರಾತ್ರಿ ಘಟನೆ ನಡೆದಿದೆ. ವಂದೇ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿಯವರು ವರ್ಚುಯಲ್ ಆಗಿ ಉದ್ಘಾಟನೆ ಮಾಡಿದ್ದರು. ಪದೇ ಪದೇ ರೈಲಿನ ಮೇಲೆ ದಾಳಿ ನಡೆಸಲಾಗುತ್ತಿದ್ದು, ಈಗ 5ನೇ ಬಾರಿ ಕಲ್ಲು ತೂರಾಟ ನಡೆದಿದೆ. ಈ ಹಿಂದೆ ಮಾಲ್ಡಾ, ಬೋಲ್ಪುರ್ ಮತ್ತು ಬಿಹಾರದಲ್ಲಿ ವಂದೇ ಭಾರತ್ ರೈಲಿನ ಮೇಲೆ ದಾಳಿ ನಡೆಸಲಾಗಿತ್ತು.
ಇಂತಹ ಘಟನೆಗಳ ಬಗ್ಗೆ ರೈಲ್ವೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ವಂದೇ ಭಾರತ್ ರೈಲಿನಲ್ಲಿ ಹಲವು ದಾಳಿಗಳ ನಂತರ ಆರ್‌ಪಿಎಫ್ ಮತ್ತು ಜಿಆರ್‌ಪಿಯಿಂದ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಅಲ್ಲದೇ, ವಂದೇ ಭಾರತ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಿಹಾರದ ಇಬ್ಬರು ಅಪ್ರಾಪ್ತರನ್ನು ಪೋರ್ಟಿಯಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರೈಲ್ವೆ ಮೂಲಗಳ ಪ್ರಕಾರ ಈ ಬಾರಿ ದಾಳಿ ನಡೆದಿರುವುದು ಬಿಹಾರದಲ್ಲಿ. ಶುಕ್ರವಾರ ಸಂಜೆ 4:25ಕ್ಕೆ ದಲ್ಖೋಲಾ ಮತ್ತು ಟೆಲ್ಟಾ ನಡುವೆ ಸಂಚಾರ ಮಾಡುತ್ತಿದ್ದ ರೈಲಿಗೆ ಕಲ್ಲು ತೂರಲಾಗಿದೆ. C06 ಕಂಪಾರ್ಟ್‌ಮೆಂಟ್‌ನ ಆಸನ ಸಂಖ್ಯೆ 70ರಲ್ಲಿ ಕುಳಿತ ಪ್ರಯಾಣಿಕರೊಬ್ಬರು ಈ ಬಗ್ಗೆ ರೈಲು ಭದ್ರತಾ ಸಿಬ್ಬಂದಿಗೆ ತಿಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ದೂರು ದಾಖಲು:ಬಳಿಕ ರೈಲಿನ ಉಸ್ತುವಾರಿ ಹೊತ್ತಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಉನ್ನತ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ತನಿಖೆಗಾಗಿ ದಲ್ಖೋಲಾ ಆರ್‌ಪಿಎಫ್ ಮತ್ತು ಬಲರಾಂಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ಸ್ವೀಕರಿಸಲಾಗಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡೇ ಹೇಳಿದ್ದಾರೆ.