ಬುಲಂದ್‌ಶಹರ್ (ಯುಪಿ):ಬುಲಂದ್‌ಶಹರ್‌ನಲ್ಲಿ ಕೊಡಲಿಯಿಂದ ತನ್ನ ಹೆತ್ತವರನ್ನು ಹತ್ಯೆಗೈದ ಗಂಭೀರ ಪ್ರಕರಣದಲ್ಲಿ 16 ವರ್ಷದ ಬಾಲಕಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 15 ರಂದು, ಶಬ್ಬೀರ್(45) ಮತ್ತು ಅವರ ಪತ್ನಿ ರಿಹಾನಾ (42) ಫರೂಖಿ ನಗರ ಲಾಲ್ ದರ್ವಾಜಾ ಮೊಹಲ್ಲಾದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಶ್ಲೋಕ್ ಕುಮಾರ್ ತಿಳಿಸಿದ್ದಾರೆ. ತನಿಖೆಯ ಸಮಯದಲ್ಲಿ ಜೋಡಿ ಕೊಲೆಯಲ್ಲಿ ಅಪ್ರಾಪ್ತೆಯ ಕೈವಾಡ ಬೆಳಕಿಗೆ ಬಂದಿದೆ.
ವಿವರ: "ಹುಡುಗನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದುದನ್ನು ಗಮನಿಸಿದ ಪೋಷಕರು ಅಸಮಾಧಾನಗೊಂಡು ಆಕೆಯನ್ನು ಥಳಿಸಿದ್ದರು. ಇದರಿಂದ ಕುಪಿತಳಾದ ಬಾಲಕಿ ತನ್ನ ಪೋಷಕರನ್ನೇ ಕೊಲ್ಲಲು ನಿರ್ಧರಿಸಿದ್ದಳು. ಅದಕ್ಕಾಗಿ ತನ್ನ ಹುಡುಗನಿಂದ 20 ಅಮಲೇರುವ ಮಾತ್ರೆಗಳನ್ನು ಪಡೆದುಕೊಂಡಿದ್ದಾಳೆ. ಮಾತ್ರೆಗಳನ್ನು ಪೋಷಕರ ಆಹಾರದಲ್ಲಿ ಬೆರೆಸಿದ್ದಾಳೆ. ಅವರು ಪ್ರಜ್ಞಾಹೀನರಾದಾಗ, ಸಾಯುವವರೆಗೂ ಕೊಡಲಿಯಿಂದ ಹಲ್ಲೆ ನಡೆಸಿದ್ದಾಳೆ" ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಪ್ರಕರಣ ಸಂಬಂಧ ಬಾಲಕಿಯನ್ನು ಬಂಧಿಸಲಾಗಿದ್ದು, ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು. ಅಪರಾಧ ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಆಕೆಗೆ ಮಾತ್ರೆಗಳನ್ನು ಪೂರೈಸಿದ ಯುವಕನನ್ನೂ ಸೆರೆ ಹಿಡಿದು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:ಮದ್ಯಪಾನಕ್ಕೆ ಹಣ ಕೊಡಲಿಲ್ಲ ಎಂದು ಅಜ್ಜನನ್ನೇ ಕೊಂದ ಮೊಮ್ಮಗ
ಬೆಂಗಳೂರಿನಲ್ಲಿ ಅಜ್ಜನ ಕೊಂದು ಹಾಕಿದ ಮೊಮ್ಮಗ:ಮದ್ಯಪಾನ ಸೇವನೆ ಮಾಡಲು ಹಣ ಕೊಡಲಿಲ್ಲವೆಂದು ಸಾಕಿ ಸಲಹಿದ್ದ ಅಜ್ಜನನ್ನು ಹತ್ಯೆಗೈದಿರುವ ಅಮಾನವೀಯ ಘಟನೆ ಫೆ.13ರ ರಾತ್ರಿ ಬೆಂಗಳೂರಿನ ಬಾಣಸವಾಡಿ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿ ಕೊಳೆಗೇರಿ ಪ್ರದೇಶದಲ್ಲಿ ನಡೆದಿತ್ತು. ಜೋಸೆಫ್ (54) ತನ್ನ ಮೊಮ್ಮಗ ಆ್ಯಂಟೋನಿಯಿಂದ ಹತ್ಯೆಯಾದ ದುರ್ದೈವಿ. ಸಂಬಂಧದಲ್ಲಿ ಸಹೋದರಿಯ ಮೊಮ್ಮಗನಾದ ಆ್ಯಂಟೋನಿಯನ್ನು ಚಿಕ್ಕ ವಯಸ್ಸಿನಿಂದಲೂ ಜೋಸೆಫ್ ತಾನೇ ಸಾಕಿದ್ದ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಮದ್ಯಪಾನದ ಚಟಕ್ಕೆ ದಾಸನಾಗಿದ್ದ ಆ್ಯಂಟನಿ ಮದ್ಯಪಾನ ಮಾಡಲು ಹಣ ಕೊಡುವಂತೆ ತಾತ ಜೋಸೆಫ್ ಬಳಿ ಕೇಳಿದ್ದ. ಆ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದವಾಗಿತ್ತು. ಮದ್ಯದ ಅಮಲಿನಲ್ಲಿದ್ದ ಆ್ಯಂಟೋನಿ ದೊಣ್ಣೆಯಿಂದ ಜೋಸೆಫ್ಗೆ ಹಲ್ಲೆ ಮಾಡಿದ್ದ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಜೋಸೆಫ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜೋಸೆಫ್ ಮೃತಪಟ್ಟಿದ್ದ. ಆಸ್ಪತ್ರೆಯಿಂದ ಬಂದ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಬಾಣಸವಾಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಲು ಯತ್ನಿಸುತ್ತಿದ್ದ ಆ್ಯಂಟೋನಿಯನ್ನ ಆರ್.ಟಿ.ನಗರ ಬಳಿ ಬಂಧಿಸಿದ್ದರು.
ಉತ್ತರ ಪ್ರದೇಶದಲ್ಲಿ ಬಾಲಕನ ನರಬಲಿ: ಉತ್ತರ ಪ್ರದೇಶದ ಪರ್ಸಾ ಗ್ರಾಮದಲ್ಲಿ ಇತ್ತೀಚೆಗೆ ವಂಚಕ ಜ್ಯೋತಿಷಿಯೊಬ್ಬನ ಪೊಳ್ಳು ಮಾತು ನಂಬಿ ನರಬಲಿಗಾಗಿ 10 ವರ್ಷದ ಬಾಲಕನನ್ನು ಕೊಂದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಮಾಂತ್ರಿಕನ ಪೊಳ್ಳು ಮಾತು ನಂಬಿ 10 ವರ್ಷದ ಬಾಲಕನ ನರಬಲಿ; ಮೂವರ ಬಂಧನ