ಬಲೋದ್ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ಶುಕ್ರವಾರ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಲಾರಿಯೊಂದು ಕಾರು ಮತ್ತು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 13 ವರ್ಷದ ಬಾಲಕಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಈ ಘಟನೆಯಲ್ಲಿ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ದೊಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮರ್ಕಟೋಳ ಗ್ರಾಮದಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ಭಾನುಪ್ರತಾಪುರದಿಂದ ಬಲೋದ್ ಕಡೆಗೆ ಬರುತ್ತಿದ್ದ ಲಾರಿಯು ಕಾರು ಮತ್ತು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಲಾರಿ ಗುದ್ದಿ ರಭಸಕ್ಕೆ ಕಾರು ರಸ್ತೆ ಪಕ್ಕದಲ್ಲಿದ್ದ ರೇಲಿಂಗ್ (ಕಬ್ಬಿಣದ ತಡೆ ಗೋಡೆ)ಗೆ ಡಿಕ್ಕಿ ಹೊಡೆದು ಅಪಘಾತದ ತೀವ್ರತೆ ಹೆಚ್ಚಿಸಿದೆ. ಪರಿಣಾಮ ಈ ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ 13 ವರ್ಷದ ಬಾಲಕಿ ಕೂಡ ಸೇರಿದ್ದಾಳೆ. ಮೂವರು ಗಾಯಾಳುಗಳನ್ನು ದೌಂಡಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.
ಈ ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಇದೇ ವೇಳೆ ರಸ್ತೆಯಲ್ಲಿ ಬಿದ್ದ ಬೈಕ್ ಮೇಲೆ ಕಾರು ಹರಿದು ಪಕ್ಕದಲ್ಲಿದ್ದ ರೇಲಿಂಗ್‌ಗೆ ಗುದ್ದಿದೆ. ಈ ಅಪಘಾತದ ಸುದ್ದಿ ತಿಳಿದ ಕೂಡಲೇ ಬಲೋದ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಈ ಅಪಘಾತದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.
ಇದನ್ನೂ ಓದಿ:ಬೈಕ್ ನಿಲ್ಲಿಸಿ ಅಜ್ಜಿಯ ಸರ ಎಳೆದ ಕಿಡಿಗೇಡಿ; ಕೈಯಲ್ಲಿದ್ದ ಬ್ಯಾಗ್‌ನಿಂದ ಹೊಡೆದು ಓಡಿಸಿದ 10 ವರ್ಷದ ಬಾಲಕಿ!- ವಿಡಿಯೋ