ನವದೆಹಲಿ:ದೇಶದಲ್ಲಿ ಕೊರೊನಾ ಮೂರನೇ ಅಲೆ ಜೋರಾಗಿದೆ. ಕಳೆದ 24 ಗಂಟೆಗಳಲ್ಲಿ ದಾಖಲೆಯ 58 ಸಾವಿರಕ್ಕೂ ಅಧಿಕ ಕೋವಿಡ್ ಸೋಂಕಿತ ಪ್ರಕರಣ ದಾಖಲಾಗಿವೆ.
ಇದೇ ವಿಚಾರವಾಗಿ ಮಾತನಾಡಿರುವ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು, ದೇಶದಲ್ಲಿ ಕಳೆದ 9 ದಿನಗಳಲ್ಲಿ 6 ಪಟ್ಟು ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳ ಏರಿಕೆ ಕಂಡಿದೆ ಎಂದು ಎಚ್ಚರಿಸಿದ್ದಾರೆ.
ಪ್ರಮುಖವಾಗಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ಕೇರಳ, ತಮಿಳುನಾಡು, ಕರ್ನಾಟಕ, ಜಾರ್ಖಂಡ್, ಗುಜರಾತ್ನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ದೇಶದ 28 ಜಿಲ್ಲೆಗಳಲ್ಲಿ ಪ್ರತಿದಿನ ಶೇ.10ಕ್ಕೂ ಹೆಚ್ಚಿನ ಕೊರೊನಾ ಪ್ರಕರಣ ದಾಖಲಾಗುತ್ತಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಶೇ. 0.79 ರಷ್ಟಿದ್ದ ಸೋಂಕಿತ ಪ್ರಕರಣಗಳ ಪ್ರಮಾಣ ಇದೀಗ ಶೇ 5.03 ತಲುಪಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಈಗಾಗಲೇ ಅನೇಕ ರಾಜ್ಯಗಳು ನೈಟ್ ಕರ್ಫ್ಯೂ ಸೇರಿದಂತೆ ಅನೇಕ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿರುವ ಕೇಂದ್ರ, ಜನರು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವಂತೆ ಮನವಿ ಮಾಡಿದೆ.
ಇದನ್ನೂ ಓದಿ:ನಾನು ಏರ್ಪೋರ್ಟ್‌ವರೆಗೆ ಜೀವಂತವಾಗಿ ಬಂದಿದ್ದಕ್ಕೆ ನಿಮ್ಮ ಸಿಎಂಗೆ ಥ್ಯಾಂಕ್ಸ್ ಹೇಳಿ: ಮೋದಿ
ಪ್ರಪಂಚದಾದ್ಯಂತ ಇಲ್ಲಿಯವರೆಗೆ ಒಮಿಕ್ರಾನ್ನಿಂದಾಗಿ 108 ಜನರು ಸಾವನ್ನಪ್ಪಿದ್ದಾಗಿ ಕೇಂದ್ರ ಮಾಹಿತಿ ನೀಡಿದ್ದು, ಜನವರಿ 4ರಂದು ಜಗತ್ತಿನಲ್ಲಿ 25.5 ಲಕ್ಷ ಕೋವಿಡ್ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಕರಣ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ ಹಾಗೂ ಸ್ಪೇನ್ದಲ್ಲಿ ಕಾಣಿಸಿಕೊಂಡಿವೆ.
ದೇಶದಲ್ಲಿ 7.40 ಕೋಟಿ ಮಕ್ಕಳು(15-18) ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳಲು ಅರ್ಹರಿದ್ದು, ಇಲ್ಲಿಯವರೆಗೆ 147.72 ಕೋಟಿ ವ್ಯಾಕ್ಸಿನ್ ಡೋಸ್ ನೀಡಲಾಗಿದೆ.