ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸಮೀಪ ಮತ್ತೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ದೆಹಲಿಯ ಪಶ್ಚಿಮ ವಾಯುವ್ಯದ 17 ಕಿ.ಮೀ ದೂರದಲ್ಲಿ ಬುಧವಾರ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಶೇ.2.7ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.
ಈ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್ ಮಾಡಿದ್ದು, ನವದೆಹಲಿಯ ಪಶ್ಚಿಮ ವಾಯುವ್ಯದ 17 ಕಿಮೀ ದೂರದಲ್ಲಿ ಬುಧವಾರ ಸಂಜೆ 4.42ರ ಸುಮಾರಿಗೆ 2.7 ತೀವ್ರತೆಯಷ್ಟು ಭೂಕಂಪನವಾಗಿದೆ ಎಂದು ತಿಳಿಸಿದೆ. ಮಂಗಳವಾರ ರಾತ್ರಿ ಕೂಡ ನವದೆಹಲಿ ಸೇರಿದಂತೆ ಕೆಲವು ಭಾಗಗಳಲ್ಲಿ ಭೂಕಂಪನದ ವರದಿಯಾಗಿತ್ತು. ಇದರ ಬೆನ್ನಲೇ ಇಂದು ಮತ್ತೆ ಭೂಮಿ ಕಂಪಿಸಿದ್ದು ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ ಅಫ್ಘಾನಿಸ್ತಾನದ ಹಿಂಡುಕುಶ್ ಪ್ರದೇಶದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ದೆಹಲಿ - ಎನ್‌ಸಿಆರ್(ರಾಷ್ಟ್ರೀಯ ರಾಜಧಾನಿ ಪ್ರದೇಶ) ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿತ್ತು ಎಂದು ತಿಳಿದು ಬಂದಿದೆ. ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಭೂಮಿ ನಡುಗಿತ್ತು. ಇದರಿಂದ ಭಯಭೀತರಾದ ಜನರು ಮನೆಯಿಂದ ಹೊರಬಂದಿದ್ದರು.
ಅಲ್ಲದೇ, ಭೂಕಂಪದ ನಂತರ ಜಮ್ಮು ಪ್ರದೇಶದ ಕೆಲವು ಭಾಗಗಳಲ್ಲಿ ಮೊಬೈಲ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ವರದಿಯಾಗಿತ್ತು. 150 ಕಿ.ಮೀಗಿಂತ ಅಧಿಕ ಆಳದಲ್ಲಿ ಕಂಪನ ಘಟಿಸಿದ್ದರಿಂದ ವಾಯುವ್ಯ ಭಾರತ ಮತ್ತು ದೆಹಲಿಯ ಜನರು ಹೆಚ್ಚು ಸಮಯದವರೆಗೆ ಕಂಪನವನ್ನು ಅನುಭವಿಸಿದ್ದಾರೆ ಎಂದು ಹಿರಿಯ ಭೂಕಂಪಶಾಸ್ತ್ರಜ್ಞರು ತಿಳಿಸಿದ್ದರು.
ಇದನ್ನೂ ಓದಿ:ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ: ವಿಡಿಯೋ