ಮುಂಬೈ (ಮಹಾರಾಷ್ಟ್ರ): ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವೇ 'ನಿಜವಾದ ಶಿವಸೇನೆ' ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಬುಧವಾರ ತೀರ್ಪು ನೀಡಿದ್ದು, ಇದನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ನಾಯಕತ್ವದ ಯುಬಿಟಿ ಬಣ, ಇಂದು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದೆ.
ಸ್ಪೀಕರ್ ತೆಗೆದುಕೊಂಡ ನಿರ್ಧಾರಕ್ಕೆ ಮಧ್ಯಂತರ ತಡೆ ಕೋರಿ ಹಿರಿಯ ವಕೀಲ ದೇವದತ್ ಕಾಮತ್, ವಕೀಲರಾದ ನಿಶಾಂತ್ ಪಾಟೀಲ್ ಮತ್ತು ರೋಹಿತ್ ಶರ್ಮಾ ಮೂಲಕ ಠಾಕ್ರೆ ಗುಂಪು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಶೆಡ್ಯೂಲ್ 10 ರಾಜಕೀಯ ಪಕ್ಷದ ವಿರುದ್ಧ ವರ್ತಿಸುವ ಶಾಸಕರನ್ನು ಅನರ್ಹಗೊಳಿಸುವ ಉದ್ದೇಶ ಹೊಂದಿದೆ ಎಂದು ಠಾಕ್ರೆ ಬಣ ಮನವಿಯಲ್ಲಿ ತಿಳಿಸಿದೆ.
ಶಾಸಕರ ಅನರ್ಹತೆ ಪ್ರಕರಣದಲ್ಲಿ ಸಭಾಧ್ಯಕ್ಷರ ತೀರ್ಪಿನ ವಿರುದ್ಧ ಸುಪ್ರೀಂ ಮೊರೆ ಹೋಗುವುದಾಗಿ ತೀರ್ಪು ಬಂದ ತಕ್ಷಣ ಉದ್ಧವ್ ಠಾಕ್ರೆ ತಿಳಿಸಿದ್ದರು. ಅದರಂತೆ ಸೋಮವಾರ (ಜ.15) ಸ್ಪೀಕರ್ ರಾಹುಲ್ ನಾರ್ವೇಕರ್ ವಿರುದ್ಧ ಠಾಕ್ರೆ ಗುಂಪು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಠಾಕ್ರೆ ಗುಂಪಿನ ಮುಖ್ಯಸ್ಥ ಉದ್ಧವ್ ಠಾಕ್ರೆ, ಶಾಸಕರ ಅನರ್ಹತೆಯ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಎಲ್ಲ ಕಾನೂನು ಕಟ್ಟಳೆಗಳನ್ನು ಮೀರಿ ಈ ತೀರ್ಪು ಪ್ರಕಟಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮಂಗಳವಾರ (ಜನವರಿ 16) ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾ ಪತ್ರಿಕಾಗೋಷ್ಠಿ ನಡೆಯಲಿದ್ದು, ಇದು ಒಂದು ರೀತಿಯಲ್ಲಿ ‘ಜನತಾ ನ್ಯಾಯಾಲಯ’ವಾಗಲಿದೆ ಎಂದು ಸಹ ಅವರು ಹೇಳಿದ್ದಾರೆ. ಮಹಾರಾಷ್ಟ್ರದ ರಾಜ್ಯ ರಾಜಕಾರಣವು ದಿನಕ್ಕೊಂದು ಮಜಲು ಪಡೆದುಕೊಳ್ಳುತ್ತಿರುವುದರಿಂದ ನಾಳೆಯ ಪತ್ರಿಕಾಗೋಷ್ಠಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಶಿಂಧೆ ಬಣವೇ ನಿಜವಾದ ಶಿವಸೇನೆ, 16 ಶಾಸಕರ ಸದಸ್ಯತ್ವ ಸಿಂಧು: ಮಹಾರಾಷ್ಟ್ರ ಸ್ಪೀಕರ್ ತೀರ್ಪು
2019ರ ವಿಧಾನಸಭಾ ಚುನಾವಣೆ ಬಳಿಕ ಅಧಿಕಾರ ಹಂಚಿಕೆ ವಿಷಯವಾಗಿ ಠಾಕ್ರೆ ನೇತೃತ್ವದ ಶಿವಸೇನೆ ದೀರ್ಘಕಾಲದ ಮಿತ್ರಪಕ್ಷ ಬಿಜೆಪಿಯೊಂದಿಗೆ ಸಂಬಂಧ ಕಳೆದುಕೊಂಡಿತ್ತು. ನಂತರ ರಾಜಭವನದಲ್ಲಿ ನಡೆದ ಗೌಪ್ಯ ಸಮಾರಂಭದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಮತ್ತು ಎನ್ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಈ ಸರ್ಕಾರವು ಕೇವಲ 80 ಗಂಟೆಗಳಲ್ಲಿ ಪತನವಾಗಿತ್ತು. ಇದಾದ ತಿಂಗಳಲ್ಲಿ ಎನ್‌ಸಿಪಿ, ಕಾಂಗ್ರೆಸ್, ಶಿವಸೇನೆ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರ ರಚನೆ ಮಾಡಿದ್ದವು. ಆಗ ಠಾಕ್ರೆ ಸಿಎಂ ಆಗಿ ಆಯ್ಕೆಯಾಗಿದ್ದರು. ಆದರೆ, 2022ರಲ್ಲಿ ಠಾಕ್ರೆ ವಿರುದ್ಧ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ 40 ಶಾಸಕರು ಬಂಡಾಯ ಎದ್ದಿದ್ದರು. ಇದರಿಂದ ಉದ್ಧವ್ ಠಾಕ್ರೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಜೊತೆಗೆ ಶಿವಸೇನೆ ಪಕ್ಷ ಶಿಂಧೆ ಹಾಗೂ ಉದ್ಧವ್ ಬಣಗಳಾಗಿ ಇಬ್ಭಾಗವಾಗಿತ್ತು.
ಆಗ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಪ್ರತಿಸ್ಪರ್ಧಿ ಬಣವು ಪರಸ್ಪರರ ಶಾಸಕರ ವಿರುದ್ಧ ಅನರ್ಹತೆ ಅರ್ಜಿಗಳನ್ನು ಸಲ್ಲಿಸಿದ್ದರು. ಏಕನಾಥ್ ಶಿಂಧೆ ಬಣದ 16 ಶಾಸಕರ ಅನರ್ಹತೆಗೆ ಉದ್ಧವ್ ಬಣ ಒತ್ತಾಯಿಸಿತ್ತು. ಈ ಅರ್ಜಿ ಸುಪ್ರೀಂಕೋರ್ಟ್ಗೂ ಹೋಗಿತ್ತು. 2023ರ ಸೆಪ್ಟೆಂಬರ್ನಲ್ಲಿ ಅನರ್ಹತೆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಸುಪ್ರೀಂಕೋರ್ಟ್ ಸ್ಪೀಕರ್ಗೆ ಸೂಚಿಸಿತ್ತು. ಅಂತೆಯೇ, ಅರ್ಜಿ ವಿಚಾರಣೆ ನಡೆಸಿದ ಸ್ಪೀಕರ್ ನಾರ್ವೇಕರ್ ತಮ್ಮ ತೀರ್ಪು ಪ್ರಕಟಿಸಿದ್ದರು.