ಮಂಬೈ( ಮಹಾರಾಷ್ಟ್ರ): ಮಹಾರಾಷ್ಟ್ರ ಲೋಕಸೇವಾ ಆಯೋಗದಿಂದ ಜಲಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಎಂಜಿನಿಯರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣನಾದ ಯುವಕನೊಬ್ಬ ಕುರಿ ಮೇಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎಂಪಿಎಸ್ಸಿ ಫಲಿತಾಂಶ ಬಂದು ಒಂದೂವರೆ ವರ್ಷ ಕಳೆದರೂ ನೇಮಕಾತಿಯಾಗದ ಕಾರಣ ನಾಸಿಕ್‌ನ ಮಾಲೆಗಾಂವ್ ತಾಲೂಕಿನ ಅಜಂಗ್ನ ಶ್ರವಣ ಗಂಜೆ ಎಂಬ ಯುವಕ ಕುರಿ ಮೇಯಿಸುತ್ತ ಜೀವನ ಸಾಗಿಸುತ್ತಿದ್ದಾನೆ.
ಆಜಾದ್ ಮೈದಾನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ನಿರ್ಧಾರ:ಹುದ್ದೆಗೆ ಆಯ್ಕೆಯಾದ ಯುವಕ ಶ್ರವಣ ಗಂಜೆ ಮಾತನಾಡಿ, ಎಂಪಿಎಸ್ಸಿಯಿಂದ ನಡೆದ ಪರೀಕ್ಷೆ ಬರೆದು ಉತ್ತೀರ್ಣನಾಗಿ ಜಲಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾಗಿದ್ದೇನೆ. ಆದರೆ, ನೇಮಕಾತಿ ಸುತ್ತೋಲೆ ಪ್ರಕಟವಾಗಿ ಮೂರೂವರೆ ವರ್ಷ ಕಳೆದಿವೆ. ಅಷ್ಟೇ ಅಲ್ಲ ಪರೀಕ್ಷಾ ಫಲಿತಾಂಶ ಬಂದು ಸುಮಾರು ಒಂದೂವರೆ ವರ್ಷವಾಗಿದೆ. ಆದರೆ, ನಮ್ಮನ್ನು ಇನ್ನೂ ನೇಮಕಾತಿ ಮಾಡಿಕೊಂಡಿಲ್ಲ. ನಮ್ಮ ಎಲ್ಲಾ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಹಂತವನ್ನು ಆಗಸ್ಟ್ 2022 ರಲ್ಲಿ ನಡೆಸಲಾಗಿತ್ತು. ಅದರ ನಂತರ, ನಾವು ನೇಮಕಗೊಳ್ಳುವ ನಿರೀಕ್ಷೆಯನ್ನು ಹೊಂದಿದ್ದೆವು. ಆದರೆ, ಆಗಲಿಲ್ಲ. ಹೀಗಾಗಿ ಹುದ್ದೆಯನ್ನು ಪಡೆದ ಎಲ್ಲ ಅಭ್ಯರ್ಥಿಗಳು ಅದಷ್ಟು ಬೇಗ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿ ಅಕ್ಟೋಬರ್ 2 ರಿಂದ ಮುಂಬೈನ ಆಜಾದ್ ಮೈದಾನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.