ನವದೆಹಲಿ:ಎಲ್‌ಇಟಿ ಉಗ್ರ ಸಂಘಟನೆ ಸಂಸ್ಥಾಪಕ, 26/11ರ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನನ್ನು ಹಸ್ತಾಂತರಿಸುವಂತೆ ಭಾರತವು ಪಾಕಿಸ್ತಾನ ಸರ್ಕಾರಕ್ಕೆ ಸಂಬಂಧಿತ ಪೂರಕ ದಾಖಲೆಗಳೊಂದಿಗೆ ಮನವಿ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಶುಕ್ರವಾರ ಖಚಿತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಗ್ಚಿ, ''ಸಯೀದ್ ಭಾರತಕ್ಕೆ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದು, ವಿಶ್ವಸಂಸ್ಥೆಯಿಂದ ನಿಷೇಧಿತ ಭಯೋತ್ಪಾದಕ ಎಂದು ಈತನನ್ನು ಘೋಷಿಸಲಾಗಿದೆ. ನಿರ್ದಿಷ್ಟ ಪ್ರಕರಣವೊಂದರಲ್ಲಿ ವಿಚಾರಣೆಗೆ ಒಳಪಡಿಸಲು ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ನಾವು ಪಾಕಿಸ್ತಾನ ಸರ್ಕಾರಕ್ಕೆ ಸಂಬಂಧಿತ ದಾಖಲೆಗಳೊಂದಿಗೆ ಕೋರಿಕೆ ರವಾನಿಸಿದ್ದೇವೆ'' ಎಂದು ತಿಳಿಸಿದರು.
ಗುರುವಾರ ಬಂದ ವರದಿಗಳ ಪ್ರಕಾರ, ಸಯೀದ್ ಹಸ್ತಾಂತರಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನ ಸರ್ಕಾರಕ್ಕೆ ಔಪಚಾರಿಕ ಮನವಿಯನ್ನು ಕಳುಹಿಸಿದೆ. ಈ ಕುರಿತು ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿದೆ. ಅಲ್ಲದೇ, ಈ ಬಗ್ಗೆ ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ಸಹ ವರದಿ ಮಾಡಿದ್ದವು. ಇದೀಗ ಈ ಕುರಿತು ಸಚಿವಾಲಯವೇ ಯಾವುದೇ ಅಧಿಕೃತವಾಗಿ ಮಾಹಿತಿ ನೀಡಿವೆ.
ಹಫೀಜ್ ಸಯೀದ್ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ. 2008ರ ಮುಂಬೈ ದಾಳಿ ಪ್ರಕರಣದ ವಿಚಾರಣೆ ಎದುರಿಸಲು ಸಯೀದ್ ಹಸ್ತಾಂತರಕ್ಕೆ ಭಾರತ ಪದೇ ಪದೇ ಒತ್ತಾಯಿಸುತ್ತಿದೆ. ಇದೇ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಈತನ ಬಂಧನಕ್ಕೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.
ಇದನ್ನೂ ಓದಿ:ಮುಂಬೈ ದಾಳಿಯ ರೂವಾರಿ ಹಫೀಜ್ ಹಸ್ತಾಂತರಿಸಲು ಪಾಕ್ಗೆ ಭಾರತ ಮನವಿ