ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸದ್ಯ ತನ್ನ ಪಟ್ಟನ್ನು ಬಿಗಿಗೊಳಿಸಿದೆ. ಹೌದು, ಗುರುವಾರ ತಿಹಾರ್ ಜೈಲಿನಲ್ಲಿ ಎಂಟು ಗಂಟೆಗಳ ಸುದೀರ್ಘ ವಿಚಾರಣೆಯ ನಂತರ, ಅವರನ್ನು ರಾತ್ರಿ ಬಂಧಿಸಲಾಯಿತು. ಇದಕ್ಕೂ ಮುನ್ನ ಮಾರ್ಚ್ 7ರಂದು ಇಡಿ ಅವರನ್ನು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಸದ್ಯ ಸಿಸೋಡಿಯಾ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಸುಮಾರು 9 ಗಂಟೆಗಳ ವಿಚಾರಣೆ ನಡೆಸಿದ ನಂತರ, ಫೆಬ್ರವರಿ 26 ರಂದು ಸಿಬಿಐ ಅವರನ್ನು ಬಂಧಿಸಿತ್ತು.
ನಾಳೆ ಜಾಮೀನಿನ ವಿಚಾರಣೆ:ಸಿಸೋಡಿಯಾ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್, ಅವರನ್ನು ಕೆಳ ನ್ಯಾಯಾಲಯಕ್ಕೆ ಹೋಗಲು ಆದೇಶ ನೀಡಿತ್ತು. ಇದಾದ ಬಳಿಕ ರೂಸ್ ಅವೆನ್ಯೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅವರ ಜಾಮೀನು ವಿಚಾರಣೆ ಮಾರ್ಚ್ 10ರಂದು ನಡೆಯಲಿದೆ. ಇದಕ್ಕೂ ಮುನ್ನ ನ್ಯಾಯಾಲಯ ಅವರನ್ನು ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಸಿಸೋಡಿಯಾ ವಾರ್ಡ್ ಬಗ್ಗೆ ಕಿಡಿ: ಸಿಸೋಡಿಯಾ ಅವರನ್ನು ಜೈಲು ನಂಬರ್ ಒಂದರಲ್ಲಿ ಇರಿಸಲಾಗಿದೆ. ಅದರ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲಿ ದರೋಡೆಕೋರರನ್ನು ಇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿದ ಜೈಲು ಆಡಳಿತ, ಸಿಸೋಡಿಯಾ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಅಲ್ಲಿ ಯಾವುದೇ ದರೋಡೆಕೋರರಿಲ್ಲ. ಹಾಗೂ ಅಲ್ಲಿ ಅತ್ಯಂತ ಕಡಿಮೆ ಸಂಖ್ಯೆ ಕೈದಿಗಳಿದ್ದಾರೆ ಎಂದು ಹೇಳಿದ್ದರು.
ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಹಾಗೂ ಶಾಸಕ ಸೌರಭ್ ಭಾರದ್ವಾಜ್ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೈಲು ಆಡಳಿತ ಈ ಸ್ಪಷ್ಟನೆ ಕೊಟ್ಟಿತ್ತು. ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸಿಬಿಐ ಕಸ್ಟಡಿಯಲ್ಲಿದ್ದ ಆಪ್ ನಾಯಕ ಮನೀಶ್ ಸಿಸೋಡಿಯಾ ಅವರಿಗೆ 6 ರಂದು ದೆಹಲಿ ವಿಶೇಷ ನ್ಯಾಯಾಲಯ ಮಾರ್ಚ್ 20 ವರೆಗೆ ನ್ಯಾಯಾಂಗ ಬಂಧನ ವಿಧಿಸಿ, ತಿಹಾರ್ ಜೈಲಿಗೆ ಕಳುಹಿಸಿತ್ತು. ಹೀಗೆ ತಿಹಾರ್ಗೆ ಜೈಲಿಗೆ ಹೋಗಿರುವ ಸಿಸೋಡಿಯಾ ಅವರನ್ನು ಇತರ ಕೈದಿಗಳೊಂದಿಗೆ ಸಾಮಾನ್ಯ ಸೆಲ್ನಲ್ಲಿ ಇರಿಸಲಾಗಿದೆ. ಮತ್ತು ಅವರಿಗೆ 'ವಿಪಸ್ಸನಾ' ಸೆಲ್ ಅನ್ನು ನಿರಾಕರಿಸಲಾಗಿದೆ ಎಂದು ಭಾರದ್ವಾಜ್ ಹೇಳಿಕೆ ನೀಡಿದ್ದರು.
ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಪ್ರತ್ಯೇಕ ಸೆಲ್ ನೀಡಿರುವುದರಿಂದ ಇಲ್ಲಿ ಅವರು ಯಾವುದೇ ತೊಂದರೆಯಿಲ್ಲದೇ ಧ್ಯಾನ ಮಾಡಲು ಅಥವಾ ಇತರ ಚಟುವಟಿಕೆಗಳನ್ನು ಮಾಡಲು ಸಾಧ್ಯ ಎಂದು ತಿಳಿಸಿದರು. ಜೈಲಿನ ನಿಯಮಗಳ ಪ್ರಕಾರ ಅವರ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ಎಲ್ಲ ವ್ಯವಸ್ಥೆಗಳು ಜಾರಿಯಲ್ಲಿವೆ. ಅವರಿಗೆ ಜೈಲಿನಲ್ಲಿ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಮಾಡಿರುವ ಆರೋಪಗಳು ಆಧಾರರಹಿತವಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದರು.
ಮಾರ್ಚ್ 11ಕ್ಕೆ ಕೆ.ಕವಿತಾ ವಿಚಾರಣೆ ನಡೆಯಲಿದೆ:ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಪುತ್ರಿ ಕೆ. ಕವಿತಾ ಅವರನ್ನೂ ಇಡಿ ವಿಚಾರಣೆ ನಡೆಸಲಿದೆ. ಅವರು ಮಾರ್ಚ್ 9 ರಂದು ಇಡಿ ಮುಂದೆ ಹಾಜರಾಗಬೇಕಿತ್ತು. ಆದರೆ, ಅವರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯನ್ನು ಉಲ್ಲೇಖಿಸಿ ಸಮಯ ಕೋರಿದರು. ಮಾರ್ಚ್ 11 ರಂದು ಇಡಿ ವಿಚಾರಣೆಯನ್ನು ಎದುರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್ ಉದ್ಯಮಿ ರಾಮಚಂದ್ರ ಪಿಳ್ಳೈ ಅವರ ಮುಂದೆ ಕುಳಿತು ಕವಿತಾ ಅವರನ್ನು ಇಡಿ ವಿಚಾರಣೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಕವಿತಾಗೆ ಕಳುಹಿಸಿದ್ದು ಇಡಿ ಸಮನ್ಸ್ ಅಲ್ಲ.. ಮೋದಿ ಸಮನ್ಸ್ : ಕೆಟಿಆರ್