ಮುಂಬೈ: ಕೋವಿಡ್ ಲಸಿಕೆ ಪಡೆದ ಬಳಿಕ ಅಡ್ಡ ಪರಿಣಾಮದಿಂದಾಗಿ ತಮ್ಮ ಪುತ್ರಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಬಾಂಬೆ ಹೈಕೋರ್ಟ್ ಮೊರೆ ಹೋಗಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ.
ಮಾತ್ರವಲ್ಲದೆ, ಲಸಿಕೆ ತಯಾರಿಸಿದ್ದ ಸೀರಮ್ ಕಂಪನಿಯಿಂದ 1 ಸಾವಿರ ಕೋಟಿ ಪರಿಹಾರ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಅರ್ಜಿಯಲ್ಲಿ ವ್ಯಕ್ತಿ ಕೋರಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ತಮ್ಮ ಮಗಳಿಗೆ ಕಳೆದ ವರ್ಷ ಜನವರಿಯಲ್ಲಿ ಲಸಿಕೆ ನೀಡಲಾಗಿತ್ತು. ಇದರ ಅಡ್ಡ ಪರಿಣಾಮಗಳಿಂದ ಪುತ್ರಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಅರ್ಜಿದಾರ ವಿವರಿಸಿದ್ದಾರೆ.
ನನ್ನ ಮಗಳು ಸ್ನೇಹಲ್ ನಾಸಿಕ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಳು. ಕಳೆದ ವರ್ಷ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಪಡೆದಿದ್ದಳು. ಕೋವಿಡ್ ಲಸಿಕೆ ಸುರಕ್ಷಿತವಾಗಿದೆ, ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿದ್ದ ಮಹಾರಾಷ್ಟ್ರ ಸರ್ಕಾರ, ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನೇಷನ್ ಡ್ರೈವ್‌ನ ಭಾಗವಾಗಿ ಲಸಿಕೆ ಪಡೆಯುವಂತೆ ಸೂಚನೆ ನೀಡಿತ್ತು.