ಗ್ವಾಲಿಯರ್(ಮಧ್ಯಪ್ರದೇಶ):ತವರು ಮನೆಯಿಂದ ವರದಕ್ಷಿಣೆ ಬರುವಂತೆ ಪತ್ನಿಗೆ ಘೋರ ಕಿರುಕುಳ ನೀಡಿರುವ ಪಾಪಿ ಗಂಡನೋರ್ವ ಆಕೆಗೆ ಆ್ಯಸಿಡ್ ಕುಡಿಸಿದ್ದಾನೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಕಟ್ಟಿಕೊಂಡ ಹೆಂಡ್ತಿಗೆ ಆ್ಯಸಿಡ್ ಕುಡಿಸಿದ ಪಾಪಿ ಗಂಡ ಗ್ವಾಲಿಯರ್ನ ಡಾಬ್ರಾ ಎಂಬಲ್ಲಿ ಈ ಘಟನೆ ನಡೆದಿದೆ. ಆರೋಪಿ ವಿರೇಂದ್ರ ಕುಮಾರ್ ಜಾತ್ವಾ ವಿರುದ್ದ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಕಲಹದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಈತ ಪತ್ನಿ ಶಶಿಗೆ ತವರು ಮನೆಯಿಂದ 3 ಲಕ್ಷ ರೂ. ಹಣ ತೆಗೆದುಕೊಂಡು ಬರುವಂತೆ ಚಿತ್ರಹಿಂಸೆ ನೀಡುತ್ತಿದ್ದನಂತೆ. ಈ ವಿಷಯವಾಗಿ ಮಹಿಳೆ ಪೋಷಕರೊಂದಿಗೆ ಮಾತನಾಡಲು ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲದೇ, ಆ್ಯಸಿಡ್ ಕುಡಿಸಿ ಕ್ರೌರ್ಯ ಮೆರೆದಿದ್ದಾನೆ. ಇದರಿಂದಾಗಿ ತೀವ್ರವಾಗಿ ಅಸ್ವಸ್ಥರಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ದೇಹದೊಳಗಿನ ಕೆಲವೊಂದು ಅಂಗಗಳು ಆ್ಯಸಿಡ್ನಿಂದಾಗಿ ಹಾನಿಗೊಳಗಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಮಹಿಳೆ ತನ್ನ ಹೇಳಿಕೆ ನೀಡಿದ್ದು, ಕುಟುಂಬಸ್ಥರು ಮದುವೆ ಸಂದರ್ಭದಲ್ಲಿ 10 ಲಕ್ಷ ರೂ. ಗಂಡನ ಮನೆಯವರಿಗೆ ನೀಡಿದ್ದಾರೆಂದು ಹೇಳಿಕೊಂಡಿದ್ದಾಳೆ.
ಈ ಘಟನೆ ಬಗ್ಗೆ ಮಹಿಳಾ ಆಯೋಗದ ಮುಖ್ಯಸ್ಥೆ(ದೆಹಲಿ ವಿಭಾಗ) ಸ್ವಾತಿ ಮಲಿವಾಲ್ ಗ್ವಾಲಿಯಾರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪ್ರಕರಣದ ಬಗ್ಗೆ ನಿರಾಸಕ್ತಿ ತೋರಿಸಿದ್ದಕ್ಕಾಗಿ ಇದೀಗ ಸಹಾಯಕ ಸಬ್ ಇನ್ಸ್ಪೆಕ್ಟರ್ ಅಮಾನತಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾತಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾಹಿತಿ ನೀಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.