ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ ತಿಂಗಳಲ್ಲಿ ನಡೆಯಲಿರುವ ಭವ್ಯ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ಭಾಗವಹಿಸುವ ಬಗ್ಗೆ ಚರ್ಚೆ ಶುರುವಾಗಿದೆ. ಇದರ ನಡುವೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ಎಂದು ಟಿಎಂಸಿ ಪಕ್ಷದ ಹಿರಿಯ ನಾಯಕರೊಬ್ಬರು ಬುಧವಾರ ತಿಳಿಸಿದರು. ಮತ್ತೊಂದೆಡೆ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆಮಂತ್ರಣವನ್ನು ತಿರಸ್ಕರಿಸಿದ್ದರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಮಗೆ ಆಹ್ವಾನವೇ ಬಂದಿಲ್ಲ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಹಾಗೂ ಉದ್ಘಾಟನೆಯು ಜನವರಿ 22ರಂದು ನಿಗದಿಯಾಗಿದೆ. ರಾಮ ಮಂದಿರ ಟ್ರಸ್ಟ್ ಹಾಗೂ ವಿಹೆಚ್ಪಿ ದೇಶದ ಪ್ರಮುಖರಿಗೆ ಆಹ್ವಾನ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು 6,000ಕ್ಕೂ ಹೆಚ್ಚು ಗಣ್ಯರು ಭವ್ಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಿಎಂ ಮಮತಾ ಹೋಗಲ್ಲ: ಅನೇಕ ರಾಜಕೀಯ ಮುಖಂಡರಿಗೂ ಆಮಂತ್ರಣ ನೀಡಲಾಗಿದೆ. ಆದರೆ, ರಾಮ ಮಂದಿರದಲ್ಲಿ ಆಡಳಿತಾರೂಢ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕೆಲ ಪಕ್ಷಗಳು ಆರೋಪಿಸುತ್ತಿವೆ. ಇದರ ನಡುವೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅಥವಾ ಪಶ್ಚಿಮ ಬಂಗಾಳ ಸರ್ಕಾರ ಅಥವಾ ಪಕ್ಷದ ಯಾವುದೇ ಪ್ರತಿನಿಧಿಗಳು ಹಾಜರಾಗುವುದಿಲ್ಲ ಎಂದು ಟಿಎಂಸಿ ತಿಳಿಸಿದೆ.