ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಧಿಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್(ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಡಿ-ಸಿಬಿಐ ಅನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲ್ಲುವ ಕೆಟ್ಟ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶುಕ್ರವಾರ ಹೇಳಿದ್ದಾರೆ. ಈ ಸರ್ವಾಧಿಕಾರಕ್ಕೆ ಸಾರ್ವಜನಿಕರು ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಪ್ರತಿಪಕ್ಷದ ನಾಯಕರು ಹೇಳಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಖರ್ಗೆ ಅವರು, '' ಪ್ರಧಾನಿ ಮೋದಿ ಅವರು ಕಳೆದ 14 ಗಂಟೆಗಳಿಂದ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮನೆಯಲ್ಲಿ ಇಡಿಯನ್ನು ಪರಿಶೀಲನೆಗೆ ಬಿಟ್ಟಿದ್ದಾರೆ. " ತೇಜಸ್ವಿ ಅವರ ಗರ್ಭಿಣಿ ಪತ್ನಿ ಮತ್ತು ಸಹೋದರಿಯರಿಗೆ ಕಿರುಕುಳ ನೀಡಲಾಗುತ್ತಿದೆ. @laluprasadrjd. ಅವರಿಗೆ ವಯಸ್ಸಾಗಿದೆ, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಈ ಸಂದರ್ಭದಲ್ಲೂ ಮೋದಿ ಸರ್ಕಾರ ಅವರ ಬಗ್ಗೆ ಮಾನವೀಯತೆ ತೋರಿಸಲಿಲ್ಲ " ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿಯಲ್ಲಿರುವ ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ದಾಳಿ ನಡೆಸಿದೆ. ಆರ್‌ಜೆಡಿ ನಾಯಕನನ್ನು ನವದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಇಡಿ ತಂಡವು ಅಲ್ಲಿಂದ ತೆರಳಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, "ಮೋದಿ ಸರ್ಕಾರವು ಪ್ರತಿಪಕ್ಷ ನಾಯಕರ ಮೇಲೆ ED-CBI ಅನ್ನು ದುರ್ಬಳಕೆ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲ್ಲುವ ಕೆಟ್ಟ ಪ್ರಯತ್ನವನ್ನು ಮಾಡುತ್ತಿದೆ" ಎಂದು ಖರ್ಗೆ ಆರೋಪಿಸಿದ್ದಾರೆ.