ಮುಂಬೈ/ಹೈದರಾಬಾದ್: ಕಳೆದ ಐದು ದಿನಗಳಿಂದ ತೆಲಂಗಾಣದಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶದ ಬಡಾವಣೆಗಳು ಜಲಾವೃತಗೊಂಡಿವೆ. ಸುಮಾರು 10ಕ್ಕೂ ಹೆಚ್ಚು ಮಂದಿ ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಅದೇ ರೀತಿ, ಮಹಾರಾಷ್ಟ್ರದಲ್ಲೂ ಮಳೆ ಸಾಕಷ್ಟು ಸಾವುನೋವಿಗೆ ಕಾರಣವಾಗಿದೆ.
ತೆಲಂಗಾಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ವಿದ್ಯುದಾಘಾತ, ಗೋಡೆ ಕುಸಿತ, ವ್ಯಕ್ತಿಗಳು ಕೊಚ್ಚಿಕೊಂಡು ಹೋಗಿರುವುದೂ ಸೇರಿದಂತೆ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ಅಂದಾಜಿಸಲಾಗುತ್ತಿದೆ. ಆದ್ರೆ, ಈ ಬಾರಿ ದೊಡ್ಡ ಪ್ರಮಾಣದಲ್ಲಿ ರಸ್ತೆಗಳಿಗೆ ಹಾನಿಯಾಗಿಲ್ಲ. ನಿರ್ಮಲ, ಕುಮ್ರಂ ಭೀಮ್, ಪೆದ್ದಪಲ್ಲಿ, ಆದಿಲಾಬಾದ್, ಜಯಶಂಕರ್, ಭೂಪಾಲಪಲ್ಲಿ, ಜಗ್ತಿಯಾಲ್, ಕರೀಂನಗರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.