ಕರ್ನಾಟಕ

karnataka

'ನಮ್ಮ ಅಂಗಾಂಗ ಮಾರಾಟ ಮಾಡಿ ಸಾಲ ತೀರಿಸಿಕೊಳ್ಳಿ': ಮಹಾರಾಷ್ಟ್ರದ 10 ರೈತರಿಂದ ಸಿಎಂಗೆ ಪತ್ರ

By ETV Bharat Karnataka Team

Published : Nov 23, 2023, 4:33 PM IST

Maharashtra farmers: ಮಹಾರಾಷ್ಟ್ರದಲ್ಲಿ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಸಾಲಬಾಧೆಗೀಡಾದ 10 ರೈತರು ಅಲ್ಲಿನ ಸಿಎಂಗೆ ಪತ್ರ ಬರೆದು, ತಮ್ಮ ಅಂಗಾಂಗ ಮಾರಾಟ ಮಾಡಿ ಬಂದ ಹಣದಲ್ಲಿ ಸಾಲ ತೀರಿಸಿಕೊಳ್ಳಲು ಕೋರಿದ್ದಾರೆ.

ಮಹಾರಾಷ್ಟ್ರದ 10 ರೈತರಿಂದ ಸಿಎಂಗೆ ಪತ್ರ
ಮಹಾರಾಷ್ಟ್ರದ 10 ರೈತರಿಂದ ಸಿಎಂಗೆ ಪತ್ರ

ಹಿಂಗೋಲಿ (ಮಹಾರಾಷ್ಟ್ರ):ವಿಲಕ್ಷಣ ಘಟನೆಯೊಂದರಲ್ಲಿ, ಬೆಳೆ ನಷ್ಟವಾಗಿ ಸಾಲ ಮಾಡಿಕೊಂಡ ರೈತರು ತಮ್ಮ ದೇಹದ ಅಂಗಾಂಗಗಳನ್ನು ಮಾರಾಟ ಮಾಡಿ ಸಾಲದ ಹಣವನ್ನು ಭರ್ತಿ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ. ಜೊತೆಗೆ ಇದರಲ್ಲಿ ಯಾವ ಅಂಗಕ್ಕೆ ಎಷ್ಟು ಹಣ ಎಂಬುದನ್ನೂ ನಮೂದಿಸಿದ್ದಾರೆ.

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಗೋರೆಗಾಂವ್ ಗ್ರಾಮದ 10 ಜನ ರೈತರು ತಮ್ಮ ದೇಹದ ಅಂಗಾಂಗಗಳ ಮಾರಾಟಕ್ಕೆ ಸಿದ್ಧರಾದವರು. ತಮ್ಮ ಕಣ್ಣು, ಯಕೃತ್ತು, ಮೂತ್ರಪಿಂಡಗಳು ಮತ್ತು ಇತರ ಅಂಗಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಪಡೆದ ಸಾಲಕ್ಕೆ ಚುಕ್ತಾ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

ರೈತರಿಗೆ ಸಾಲ ಎಷ್ಟಿದೆ?:ದೀಪಕ್ ಕಾವರ್ಕೆ (3 ಲಕ್ಷ ರೂಪಾಯಿ), ನಾಮದೇವ್ ಪತಂಗೆ (2.99 ಲಕ್ಷ ರೂ.), ಧೀರಜ್ ಮಾಪಾರಿ (2.25 ಲಕ್ಷ ರೂ.), ಗಜಾನನ ಕವರ್ಖೆ (2 ಲಕ್ಷ ರೂ.), ರಾಮೇಶ್ವರ ಕವರ್ಖೆ, ಅಶೋಕ್ ಕವರ್ಕೆ, ಗಜಾನನ್​ ಜಾಧವ್ (ತಲಾ 1.50 ಲಕ್ಷ ರೂ.). ದಶರತ್ ಮುಳೆ (1.20 ಲಕ್ಷ ರೂ.), ವಿಜಯ್ ಕವರ್ಕೆ (1.10 ಲಕ್ಷ ರೂ.), ರಾಮೇಶ್ವರ ಕವರ್ಖೆ (90 ಸಾವಿರ ರೂ. ) ಅವರು ಸರ್ಕಾರಿ ಬ್ಯಾಂಕ್​ಗಳು ಮತ್ತು ಖಾಸಗಿ ಲೇವಾದೇವಿದಾರರಲ್ಲಿ ಸಾಲ ಮಾಡಿಕೊಂಡಿದ್ದಾರೆ.

ಅಂಗಾಂಗಕ್ಕೂ ರೇಟ್​ ಫಿಕ್ಸ್​:ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ರೈತರು ತಮ್ಮ ದೇಹದ ಅಂಗಗಳನ್ನು ಮಾರಾಟ ಮಾಡಲು ಒಪ್ಪಿಗೆ ಸೂಚಿಸಿರುವ ಜೊತೆಗೆ ಯಾವ ಅಂಗಕ್ಕೆ ಎಷ್ಟು ಹಣ ಎಂಬುದನ್ನೂ ನಮೂದಿಸಿದ್ದಾರೆ. ಲಿವರ್‌ಗೆ 90 ಸಾವಿರ ರೂಪಾಯಿ, ಮೂತ್ರಪಿಂಡಕ್ಕೆ 75 ಸಾವಿರ ರೂಪಾಯಿ, ಕಣ್ಣನ್ನು 25,000 ರೂಪಾಯಿಗೆ ಪಡೆದುಕೊಳ್ಳಬಹುದು ಎಂದಿದ್ದಾರೆ.

ಪತ್ರದಲ್ಲಿ ಸಹಿ ಹಾಕಿರುವ ನೊಂದ ರೈತರೊಬ್ಬರು ಹೇಳುವಂತೆ, ನಾವು 10 ಜನರ ರೈತರು ಸಾಲ ನೀಡಿರುವ ಬ್ಯಾಂಕ್​ಗಳ ಮತ್ತು ಖಾಸಗಿ ಲೇವಾದೇವಿದಾರರ ಕಿರುಕುಳಕ್ಕೆ ಬೇಸತ್ತಿದ್ದೇವೆ. ಹೀಗಾಗಿ ನಮ್ಮ ದೇಹದ ಅಂಗಾಂಗಗಳ್ನು ಮಾರಾಟ ಮಾಡಿ ಸಾಲ ತೀರಿಸಲು ಮುಂದಾಗಿದ್ದೇವೆ. ಸಿಎಂಗೆ ನಮ್ಮ ಮನವಿ ಪತ್ರವನ್ನು ಸಲ್ಲಿಸಲು ತಹಶಿಲ್ದಾರ್ ಮತ್ತು ಗೋರೆಗಾಂವ್ ಪೊಲೀಸ್ ಠಾಣೆಗೆ ಕೋರಿದ್ದೇವೆ ಎಂದು ಹೇಳಿದ್ದಾರೆ.

ಕುಟುಂಬಸ್ಥರು ಕೂಡ ಭಾಗಿ:ನಮ್ಮೊಂದಿಗೆ ಹೆಂಡತಿ, ಮಕ್ಕಳು ಮತ್ತು ಇತರ ಕುಟುಂಬ ಸದಸ್ಯರು ಕೂಡ ತಮ್ಮ ದೇಹದ ಅಂಗಗಳು, ಕೈಕಾಲುಗಳನ್ನು ಮಾರಾಟ ಮಾಡಲು ಸ್ವಯಂಪ್ರೇರಿತರಾಗಿ ಮುಂದಾಗಿದ್ದೇವೆ. ನಾವು ಮೊದಲು 10 ರೈತರು ಮಾತ್ರ ಈ ನಿರ್ಧಾರಕ್ಕೆ ಬಂದಿದ್ದೇವೆ. ಇನ್ಮುಂದೆ ನಮ್ಮಂತೆಯೇ ಹಲವರು ಬರುತ್ತಾರೆ ನೋಡಿ ಎಂದು ಅವರು ತಿಳಿಸಿದ್ದಾರೆ.

ಕವರ್ಖೆ ಎಂಬ ಇನ್ನೊಬ್ಬ ರೈತ ಮಾತನಾಡಿ, ಇಲ್ಲಿನ ರೈತರು ಹತ್ತಿ ಮತ್ತು ಸೋಯಾಬೀನ್ ಅನ್ನು ಬೆಳೆಯುತ್ತಾರೆ. ಆದರೆ, ಈ ವರ್ಷ ಮಳೆ ಕೊರತೆ ಮತ್ತು ಬೆಳೆಗಳಿಗೆ ರೋಗಗಳು ತಗುಲಿದ ಕಾರಣ ಸುಮಾರು 80 ರಷ್ಟು ಬೆಳೆ ಹಾಳಾಗಿದೆ. ಇದರಿಂದ ಮಾಡಿದ ಸಾಲವನ್ನು ತೀರಿಸಲು ಅಸಾಧ್ಯವಾಗಿದೆ. ಮುಂಗಾರು ಬೆಳೆ ನಷ್ಟವಾಗಿದೆ. ಹಿಂಗಾರು ಬೆಳೆ ಬೆಳೆಯಲೂ ನಮ್ಮಲ್ಲಿ ಹಣವಿಲ್ಲ. ಸರ್ಕಾರ ಬೆಳೆ ವಿಮೆ ಕೂಡ ನೀಡಿಲ್ಲ. ಸಾಲ ಮನ್ನಾ ಮಾಡುವ ಭರವಸೆಯೂ ಈಡೇರಿಲ್ಲ. ಬೆಳೆಗೆ ನೀಡಬೇಕಿದ್ದ ಬೆಂಬಲ ಬೆಲೆ ಕೂಡ ಸರಿಯಾಗಿ ಸಿಗುತ್ತಿಲ್ಲ ಎಂದು ಅಹವಾಲು ತೋಡಿಕೊಂಡಿದ್ದಾರೆ.

ರೈತರಿಗೆ ನೆರವಾಗಲು ಆಗ್ರಹ:ರೈತರ ಈ ಆಘಾತಕಾರಿ ಸುದ್ದಿ ಕೇಳಿ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಮತ್ತು ಶಿವಸೇನೆ (ಉದ್ಧವ್​ ಬಣ) ರೈತ ನಾಯಕ ಕಿಶೋರ್ ತಿವಾರಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ತಕ್ಷಣವೇ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ನಾಸಿಕ್‌ನ ಹಲವು ನಷ್ಟಕ್ಕೀಡಾದ ಈರುಳ್ಳಿ ರೈತರು ಬೆಳೆ ಹಾನಿಯಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಆತ್ಮಹತ್ಯೆಗೆ ಅನುಮತಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

ಇದನ್ನೂ ಓದಿ:350 ರೂಪಾಯಿಗಾಗಿ 60 ಬಾರಿ ಇರಿದು ಯುವಕನ ಕೊಂದ ಬಾಲಕ.. ಡ್ಯಾನ್ಸ್ ಮಾಡಿ ವಿಕೃತಿ!

ABOUT THE AUTHOR

...view details