ಹೈದರಾಬಾದ್, ತೆಲಂಗಾಣ:ಜಾತಿಯ ಹೆಸರಿನಲ್ಲಿ ಅವಮಾನಿಸಿದ್ದಾರೆ ಎಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ವನಸ್ಥಲಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಕುರಿತು ಯುವತಿ ಕುಟುಂಬಸ್ಥರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಅನುಸರಿಸಿದ್ದಾರೆ.
ಪೊಲೀಸರು ಹಾಗೂ ಸಂತ್ರಸ್ತೆಯ ಕುಟುಂಬಸ್ಥರು ನೀಡಿರುವ ವಿವರದ ಪ್ರಕಾರ, ಯಾದಾದ್ರಿ ಭುವನಗಿರಿ ಜಿಲ್ಲೆ ಸಂಸ್ಥಾನ ನಾರಾಯಣಪುರಂ ತಾಲೂಕಿನ ಕೆಲೋತ್ತು ತಾಂಡಾದ ಕೆಲೋತ್ತು ಜಗ್ರುನಾಯಕ್ ಮತ್ತು ವಿಜಯಲಕ್ಷ್ಮಿ ದಂಪತಿ ಜೀವನಕ್ಕಾಗಿ ಹೈದರಾಬಾದ್ ನಗರಕ್ಕೆ ಬಂದಿದ್ದರು. ಗುರ್ರಂಗುಡ ಬಳಿ ಟಿಫಿನ್ ಸೆಂಟರ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2018ರಲ್ಲಿ ಹಿರಿಯ ಮಗ ಗೋಪಿನಾಯಕ್ (26) ಗುರ್ರಂಗೌಡ ರಾಜಿರೆಡ್ಡಿ ಕಾಲೋನಿಯಲ್ಲಿ ವಾಸವಾಗಿರುವ ಯುವತಿ (21) ಜತೆ ಸ್ನೇಹ ಬೆಳೆದಿತ್ತು. ಅವರ ಸ್ನೇಹ ಪ್ರೀತಿಗೆ ತಿರುಗಿತ್ತು.
ಯುವಕ ಉನ್ನತ ವ್ಯಾಸಂಗಕ್ಕಾಗಿ 2019 ರಲ್ಲಿ ಲಂಡನ್‌ಗೆ ಹೋಗಿದ್ದನು. ಆದ್ರೂ ಸಹಿತ ಆಕೆ ಮತ್ತು ಪ್ರಿಯಕರ ಗೋಪಿನಾಯಕ್ ಇಬ್ಬರು ಸದಾ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಗೋಪಿನಾಯಕ್ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿ ಒಂದು ವರ್ಷದ ಹಿಂದೆ ಲಂಡನ್‌ನಿಂದ ನಗರಕ್ಕೆ ಬಂದಿದ್ದ. ಬಳಿಕ ಇಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡಿದ್ದನು.
ಓದಿ:ಯುವಕನನ್ನು ಕೊಂದು ಮೃತನ ತಾಯಿ ಜೊತೆ ಹುಡುಕಾಟ ನಡೆಸಿದ್ದ ಹಂತಕ ಸೇರಿ ಮೂವರ ಬಂಧನ
ಆರು ತಿಂಗಳ ಹಿಂದೆ ಇಬ್ಬರೂ ಮನೆಯಲ್ಲಿ ಹೇಳದೆ ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆಯಾಗಿದ್ದರು. ಬಳಿಕ ಅವರವರ ಮನೆಗಳಲ್ಲಿ ವಾಸವಾಗಿದ್ದರು. ನಾಲ್ಕು ತಿಂಗಳ ಹಿಂದೆ ಯುವತಿ ಯುವಕನ ಮನೆಗೆ ತೆರಳಿದ್ದಳು. ಗೋಪಿನಾಯಕ್ ಅವರ ಮನೆಯವರು ತಮ್ಮ ಮನೆಗೆ ಏಕೆ ಬಂದಿದ್ದೀಯಾ ಎಂದು ಪ್ರಶ್ನಿಸಿದರು. ಆಗ ಯುವತಿ ನಮ್ಮಿಬ್ಬರಿಗೆ ಮದುವೆಯಾಗಿರುವುದನ್ನು ಬಹಿರಂಗಪಡಿಸಿದರು. ಈ ವೇಳೆ, ಯುವಕನ ಕುಟುಂಬಸ್ಥರು ಹಾಗೂ ಯುವತಿಯ ನಡುವೆ ವಾಗ್ವಾದ ನಡೆದಿದೆ. ಬಳಿಕ ಆಕೆಯನ್ನು ಯಾವುದೋ ರೀತಿಯಲ್ಲಿ ಮನವರಿಕೆ ಮಾಡಿ ತಮ್ಮ ಮನೆಗೆ ಕಳುಹಿಸಿದರು.
ಈ ವಿಷಯ ಯುವತಿಯ ಕುಟುಂಬ ಸದಸ್ಯರಿಗೆ ತಿಳಿದಿತ್ತು. ಅಂದಿನಿಂದ ಯುವತಿಯ ಪೋಷಕರು ಮತ್ತು ಯುವಕನ ನಡುವೆ ಭಿನ್ನಾಭಿಪ್ರಾಯಗಳಿವೆ. ಗೋಪಿನಾಯಕ್ ಅವರನ್ನು ಜಾತಿಯ ಹೆಸರಿನಲ್ಲಿ ನಿಂದಿಸತೊಡಗಿದರು ಎಂಬ ಆರೋಪವಿದೆ. ಈ ಕ್ರಮದಲ್ಲಿ ಶನಿವಾರ ಸಂಜೆ ಮನನೊಂದ ಯುವಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ನ್ಯಾಯಕ್ಕಾಗಿ ಆಗ್ರಹಿಸಿ ಮೃತನ ಕುಟುಂಬಸ್ಥರು ಭಾನುವಾರ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ತಂದೆಯ ದೂರಿನ ಮೇರೆಗೆ ಪೊಲೀಸರು ಎಸ್‌ಸಿ ಮತ್ತು ಎಸ್‌ಟಿ ಅಟ್ರಾಸಿಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಕುರಿತು ಯುವತಿ ಕುಟುಂಬಸ್ಥರ ಪ್ರತಿಕ್ರಿಯೆ ಏನೆಂಬುದು ತಿಳಿದು ಬರಬೇಕಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಬಳಿಕ ಗೋಪಿನಾಯಕ್ ಪೋಷಕರು ಧರಣಿಯಿಂದ ಹಿಂದೆ ಸರಿದು ಮಗನ ಅಂತ್ಯಕ್ರಿಯೆ ನೆರವೇರಿಸಿದರು.
ಓದಿ:ಚಿನ್ನ ಸಾಗಿಸಲು ವಿಶೇಷ ಒಳ ಉಡುಪು ಧರಿಸಿದ್ದ ಚಾಲಾಕಿಗಳು.. ಅಕ್ರಮ ಭೇದಿಸಿದ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು