ನವದೆಹಲಿ: ಸಂಸತ್ ಮುಂಗಾರು ಉಭಯ ಅಧಿವೇಶನಗಳು ಇಂದೂ ಕೂಡ ಪೆಗಾಸಸ್‌ಗೆ ಬಲಿಯಾಗಿವೆ. ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲ ಕೋಲಾಹಲದಿಂದಾಗಿ ಮತ್ತೆ ನಾಳೆಗೆ ಮುಂದೂಡಿಕೆಯಾಗಿದೆ. ಪೆಗಾಸಸ್ ವಿಷಯದ ಬಗ್ಗೆ ಚರ್ಚೆ ನಡೆಸಬೇಕೆಂದು ವಿಪಕ್ಷಗಳು ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿದವು. ಈ ಗದ್ದಲದ ನಡುವೆಯೇ ಕೆಳಮನೆಯಲ್ಲಿ ಕಾರ್ಖಾನೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ಹಾಗೂ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣಾ ಮಸೂದೆಗಳನ್ನು ಅಂಗೀಕರಿಸಲಾಯಿತು.
ಇದಕ್ಕೂ ಮುನ್ನ ಸ್ಪೀಕರ್ ಓಂ ಬಿರ್ಲಾ, ಗಲಾಟೆಯ ನಡುವೆ ಪ್ರಶ್ನೋತ್ತರಗಳನ್ನು ಕೈಗೆತ್ತಿಕೊಂಡರು. ಆಗಲೂ ವಿಪಕ್ಷಗಳು ಗದ್ದಲವನ್ನು ಮುಂದುವರಿಸಿದ್ದರು. ಪರಿಣಾಮ ಲೋಕಸಭೆಯನ್ನು ನಾಳೆಗೆ ಮಟ್ಟಿಗೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲೂ ಗದ್ದಲ
ಇತ್ತ ರಾಜ್ಯಸಭೆಯಲ್ಲೂ ಪೆಗಾಸಸ್ ವಿಷಯ ಪ್ರತಿಧ್ವನಿಸಿತು. ಸಚಿವರು, ಮಾಜಿ ಸಿಎಂಗಳು, ನ್ಯಾಯಾಧೀಶರು ಹಾಗೂ ಪತ್ರಕರ್ತರು ಸೇರಿದಂತೆ ಹಲವರ ಫೋನ್ ಹ್ಯಾಕಿಂಗ್ ಸಂಬಂಧ ಪೆಗಾಸಸ್ ಬಗ್ಗೆ ಚರ್ಚೆಗೆ ಪಟ್ಟು ಹಿಡಿದವು. ಘೋಷಣೆಗಳನ್ನು ಕೂಗಿದರಲ್ಲದೆ, ಪ್ರತಿಭಟನೆ ನಡೆಸಿದರು. ಸದನವನ್ನು ಹಲವಾರು ಬಾರಿ ಮುಂದೂಡಲಾಗಿತ್ತು. ಪುನಾರಂಭಗೊಂಡಾಗಲೂ ಪದೇ ಪದೆ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸಭಾಪತಿಗಳು ಕಲಾಪವನ್ನು ನಾಳೆಗೆ ಮುಂದೂಡಿದರು.