ಪುಣೆ (ಮಹಾರಾಷ್ಟ್ರ): ತನ್ನ ಅಜ್ಜಿಯ ಕತ್ತಿನಲ್ಲಿದ್ದ ಬಂಗಾರದ ಸರ ಕಸಿದುಕೊಂಡು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ ವ್ಯಕ್ತಿಯ ಪ್ರಯತ್ನವನ್ನು 10 ವರ್ಷದ ಬಾಲಕಿಯೊಬ್ಬಳು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಪುಣೆ ರಸ್ತೆಯೊಂದರಲ್ಲಿ ಅಜ್ಜಿ, ಮೊಮ್ಮಗಳು ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ.
ವಿವರ:ಫೆಬ್ರವರಿ 25 ರಂದು ಪುಣೆ ನಗರದ ಮಾಡೆಲ್ ಕಾಲೋನಿ ಪ್ರದೇಶದಲ್ಲಿ 60 ವರ್ಷದ ಲತಾ ಘಾಗ್ ತಮ್ಮ ಮೊಮ್ಮಗಳಾದ ರುತ್ವಿ ಘಾಗ್ ಜೊತೆ ಮನೆಗೆ ಹಿಂದಿರುಗುತ್ತಿದ್ದರು. ದಾರಿ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅಜ್ಜಿ ಧರಿಸಿದ್ದ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ. ಇದನ್ನು ನೋಡಿದ 10 ವರ್ಷದ ಬಾಲಕಿ, ಆತನ ಮುಖಕ್ಕೆ ಬ್ಯಾಗ್‌ನಿಂದ ಹಿಗ್ಗಾಮುಗ್ಗ ಹೊಡೆಯಲು ಆರಂಭಿಸಿದ್ದಾಳೆ. ನಂತರ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಪುಣೆ ಪೊಲೀಸರು ಅಜ್ಜಿ, ಮೊಮ್ಮಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮಾರ್ಚ್ 9 ರಂದು ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 393 ರ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅಜ್ಜಿಯ ಅಳಿಯ ಮತನಾಡಿ, "ಲತಾ ಘಾಗ್ ಅವರು ಮೊಮ್ಮಗಳಾದ ರುತ್ವಿ ಘಾಗ್ ಜೊತೆ ತಮ್ಮ ಮಗಳ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ರೂಟ್ ಕೇಳುವ ನೆಪದಲ್ಲಿ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ನನ್ನ ಅತ್ತೆ ಧರಿಸಿದ್ದ ಚೈನ್ ಕಸಿದುಕೊಳ್ಳಲು ಪ್ರಯತ್ನಿಸಿದ. ತಕ್ಷಣವೇ ಅವರು ಜೋರಾಗಿ ಕೂಗಲು ಪ್ರಾರಂಭಿಸಿದ್ದಾರೆ. ಕಳ್ಳನ ಅಂಗಿಯ ಕಾಲರ್ ಹಿಡಿದು ದೂಡಿದ್ದಾರೆ. ಈ ವೇಳೆ ಹತ್ತು ವರ್ಷದ ಬಾಲಕಿ ಆರೋಪಿಗೆ ತನ್ನ ಕೈಯ್ಯಲ್ಲಿದ್ದ ಬ್ಯಾಗ್‌ನಿಂದ ಹೊಡೆಯಲು ಪ್ರಾರಂಭಿಸಿದಳು. ಸರ ಕಸಿದುಕೊಳ್ಳುವ ಪ್ರಯತ್ನ ವಿಫಲವಾದ ಕಾರಣ ಆ ವ್ಯಕ್ತಿ ಸ್ಥಳದಿಂದ ಪರಾರಿಯಾದ. ಗಲಾಟೆಯ ಸಮಯದಲ್ಲಿ ಅತ್ತೆ ರಸ್ತೆ ಮೇಲೆ ಬಿದ್ದಿದ್ದು, ಕೈ ಮತ್ತು ಮೂಗಿಗೆ ಗಾಯಗಳಾಗಿವೆ" ಎಂದು ಹೇಳಿದರು.
ಇದನ್ನೂ ಓದಿ:ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಬೆನ್ನಟ್ಟಿ ಹಿಡಿದ ಜನ
ಠಾಣೆ ಹಿಂಭಾಗ ಕಳ್ಳ ಲಾಕ್: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಹ ಇಂತಹದ್ದೇ ಘಟನೆ ಇತ್ತೀಚೆಗೆ ನಡೆದಿತ್ತು. ಸರಗಳ್ಳತನ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿ ಪೊಲೀಸ್ ಠಾಣೆ ಹಿಂಭಾಗದ ಪ್ರದೇಶದಲ್ಲೇ ಸಿಕ್ಕಿಬಿದ್ದ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಮಂಜುನಾಥ್ ಬಂಧಿತ ಆರೋಪಿ. ಈತ 2022ರ ಡಿಸೆಂಬರ್ 4 ರಂದು ಸಂಜೆ 6 ಗಂಟೆ ಸುಮಾರಿಗೆ ಪೂರ್ಣಪ್ರಜ್ಞಾ ಬಡಾವಣೆಯ ರುಕ್ಮಿಣಿ ಎಂಬ ವೃದ್ಧೆಯ 44.7 ಗ್ರಾಂ. ತೂಕದ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದ. ಆರೋಪಿಯ ಚಲನವಲನಗಳನ್ನು ಸಿಸಿಟಿವಿಯಲ್ಲಿ ಗಮನಿಸಿದ ಪೊಲೀಸರು, ಮಾಹಿತಿ ಕಲೆ ಹಾಕಿ ಪೊಲೀಸ್ ಠಾಣೆ ಹಿಂಭಾಗದಲ್ಲೇ ಬಂಧಿಸಿದ್ದರು.
ಇದನ್ನೂ ಓದಿ:ವೃದ್ಧೆಯ ಮಾಂಗಲ್ಯ ಸರ ಕಿತ್ತು ಪರಾರಿ.. ಪೊಲೀಸ್ ಠಾಣೆ ಹಿಂಬದಿಯಲ್ಲೇ ಸಿಕ್ಕಿಬಿದ್ದ ಕಳ್ಳ!