ನವದೆಹಲಿ: ಭಾರತ ಸರ್ಕಾರದ ಒಡೆತನದಲ್ಲಿರುವ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತನ್ನ ಷೇರುಗಳನ್ನು ಮಾರಾಟ ಮಾಡುವ ಸಂಬಂಧ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿಯ ಅನುಮತಿ ಕೋರಿದೆ.
ಈ ಮೂಲಕ ಇನ್ಸೂರೆನ್ಸ್ ಕಂಪೆನಿಯು ಕೇಂದ್ರ ಸರ್ಕಾರದ ಶೇ 5ರಷ್ಟು ಷೇರುಗಳನ್ನು ಆರಂಭಿಕ ಸಾರ್ವಜನಿಕರ ಕೊಡುಗೆಯ (ಐಪಿಒ) ಮೂಲಕ ಹೂಡಿಕೆದಾರರಿಗೆ ವಿತರಿಸಲು ನಿರ್ಧರಿಸಿದೆ.
ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರವು ನಿಗಮದ ಒಟ್ಟು 316 ಮಿಲಿಯನ್ ಷೇರುಗಳನ್ನು ಅಂದರೆ ಸುಮಾರು 31 ಕೋಟಿಗೂ ಹೆಚ್ಚು ಷೇರುಗಳನ್ನು ಐಪಿಒ ಮೂಲಕ ಹೂಡಿಕೆದಾರರಿಗೆ ಮಾರಾಟ ಮಾಡಲಿದೆ.
ಕೇಂದ್ರ ಸರ್ಕಾರವು ಈ ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನು ಮಾರ್ಚ್ 2022ರ ಹಣಕಾಸು ವರ್ಷಾಂತ್ಯದೊಳಗೆ ಮುಗಿಸುವ ಗುರಿ ಹೊಂದಿದೆ. ಇನ್ನು, ಹಣಕಾಸು ವರ್ಷ 2022ರಲ್ಲಿ ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನು 78 ಸಾವಿರ ಕೋಟಿ ರೂಗಳಿಗೆ ಪರಿಷ್ಕರಿಸಲಾಗಿದೆ.
ಇದನ್ನೂ ಓದಿ:ಇಸ್ರೋದಿಂದ ವರ್ಷದ ಮೊದಲ ಉಡ್ಡಯನ ಯಶಸ್ವಿ: ಕಕ್ಷೆ ಸೇರಿದ 3 ಉಪಗ್ರಹಗಳು
ಜೀವ ವಿಮಾನ ನಿಗಮದ ಪಾಲಿಸಿ ಹೊಂದಿರುವವರು ಹಾಗು ಉದ್ಯೋಗಿಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ದಲ್ಲಿ ಪಾಲು ಪಡೆಯಲಿದ್ದಾರೆ ಎಂದು ಸೆಬಿಗೆ ಸಲ್ಲಿಸಿದ ದಾಖಲೆಯಲ್ಲಿ ಎಲ್‌ಐಸಿ ತಿಳಿಸಿದೆ.
ಸೆಪ್ಟೆಂಬರ್ 2021ರ ಹೊತ್ತಿಗೆ ಎಲ್‌ಐಸಿಯ ಒಟ್ಟು ಆಸ್ತಿ ಮೌಲ್ಯವು 5.4 ಲಕ್ಷ ಕೋಟಿ ರೂ ಇದೆ ಎಂದು ಸೆಬಿಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.