ಅಯೋಧ್ಯೆ :ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮ ಮಂದಿರ ದೇಗುಲ 2024 ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮುಂದಿನ ವರ್ಷದ ಜನವರಿ 15 ರಿಂದ 24 ರ ನಡುವೆ ರಾಮನ (ರಾಮಲಲ್ಲಾ) ವಿಗ್ರಹ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದ್ದು, ಒಪ್ಪಿಗೆಗಾಗಿ ಕಾಯಲಾಗುತ್ತಿದೆ.
ಧಾರ್ಮಿಕ ನಗರಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ನೂತನ ದೇಗುಲದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾನಾ ಕಾರ್ಯಕ್ರಮವನ್ನು ಮುಂದಿನ ವರ್ಷದ ಜನವರಿಯಲ್ಲಿ ನಡೆಸಲು ರಾಮಮಂದಿರ ಟ್ರಸ್ಟ್ ಉದ್ದೇಶಿಸಿದೆ. ಇದಕ್ಕಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಮುಂದಿನ ವರ್ಷದ ಆರಂಭದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ಕಳುಹಿಸಲಾಗಿದೆ. ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸುಮಾರು 10 ಸಾವಿರ ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಮನ ವಿಗ್ರಹ ಪ್ರತಿಷ್ಠಾಪನೆಗಾಗಿ ದೇಶದ ಪ್ರತಿ ಗ್ರಾಮದ ದೇವಸ್ಥಾನವನ್ನು ಸಂಪರ್ಕಿಸುವ ಯೋಜನೆ ಇದೆ. ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಭರದ ಸಿದ್ಧತೆಗಳು ನಡೆಯುತ್ತಿವೆ. ದೇಶದ ಎಲ್ಲ ಮೂಲೆಯಿಂದಲೂ ಭಕ್ತರು ಆಗಮಿಸಲಿದ್ದು, ವ್ಯಾಪಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.