ಮಚಲಿಪಟ್ಟಣಂ(ಆಂಧ್ರಪ್ರದೇಶ): ಚುನಾವಣೆಯ ವೇಳೆ ರಾಜಕೀಯ ಪಕ್ಷಗಳು ನೀಡುವ ಚುನಾವಣಾ ಭರವಸೆಗಳ ಅನುಷ್ಠಾನಕ್ಕೆ ಕಾನೂನನ್ನು ಜಾರಿಗೊಳಿಸುವ ಅಗತ್ಯತೆಯ ಕುರಿತು ರಾಷ್ಟ್ರವ್ಯಾಪಿ ಚರ್ಚೆಗೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸೋಮವಾರ ಕರೆ ನೀಡಿದ್ದಾರೆ. ರಾಜಕೀಯ ಪಕ್ಷಗಳು ಭರವಸೆಗಳನ್ನು ನೀಡುವಾಗ ಜವಾಬ್ದಾರರಾಗಿರಬೇಕು. ಸಾಧಕ-ಬಾಧಕಗಳನ್ನು ಅಳೆದು, ಕಾರ್ಯಗತಗೊಳಿಸಬಹುದಾದ ಭರವಸೆಗಳನ್ನು ಮಾತ್ರ ನೀಡಬೇಕು. ರಾಜಕೀಯ ಪಕ್ಷಗಳು ಭರವಸೆ ನೀಡಿರುವುದು ಜನರ ಹಿತದೃಷ್ಟಿಯಿಂದಾಗಿರಬೇಕು ಎಂದು ವೆಂಕಯ್ಯನಾಯ್ಡು ಸಲಹೆ ನೀಡಿದ್ದಾರೆ.
ಕೃಷ್ಣಾ ಜಿಲ್ಲಾ ಪರಿಷತ್ತಿನ ಮಾಜಿ ಅಧ್ಯಕ್ಷ ಪಿನ್ನಮನೇನಿ ಕೋಟೇಶ್ವರ ರಾವ್ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂಥದ್ದೊಂದು ಕಾನೂನಿಗೆ ಬೇಡಿಕೆಯಿದೆ. ಮತದಾನದ ಭರವಸೆಗಳ ಮೇಲೆ ರಾಜಕೀಯ ಪಕ್ಷಗಳಿಗೆ ಜವಾಬ್ದಾರಿ ಇರುವಂತೆ ಇಂಥಹ ಕಾನೂನುಗಳು ಮಾಡುತ್ತವೆ. ಭರವಸೆಗಳನ್ನು ಗೌರವಿಸಲು ವಿಫಲವಾದ ಸಂದರ್ಭದಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ. ಅಂತಹ ಕಾನೂನಿನ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯಾಗುವ ಅಗತ್ಯವಿದೆ ಎಂದಿದ್ದಾರೆ.