ಹೈದರಾಬಾದ್: ತೆಲಂಗಾಣ ಸರ್ಕಾರದ ಸಚಿವ ಕೆಟಿ ರಾಮರಾವ್ ಮತ್ತೊಮ್ಮೆ ಮಾನವೀಯ ಕಾರ್ಯದ ಮೂಲಕ ಜನಮನ ಗೆದ್ದಿದ್ದಾರೆ. ಈಟಿವಿ ಭಾರತ - ಈನಾಡು ತೆಲುಗು ಮಾಧ್ಯಮದ ಮೂಲಕ ಪ್ರಸಾರವಾದ ಸುದ್ದಿಗೆ ಸ್ಪಂದಿಸಿದ ಅವರು, ಉನ್ನತ ಶಿಕ್ಷಣ ಪಡೆದು ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಉದ್ಯೋಗ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈಟಿವಿ ಫಲಶ್ರುತಿ...
ಈಟಿವಿ ಭಾರತ ತೆಲುಗು ಮಾಧ್ಯಮದ ಮೂಲಕ "ಎಂಎಸ್ಸಿ ಫಸ್ಟ್ ಕ್ಲಾಸ್... ಜಾಬ್ ಸ್ವೀಪರ್" ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡಿತ್ತು. ಈ ಲೇಖನಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆಟಿಆರ್, ಆಕೆಗೆ ಪುರಸಭೆ ಇಲಾಖೆಯ ಹೊರಗುತ್ತಿಗೆ ಇಲಾಖೆಯಲ್ಲಿ ಎಂಟೊಮಾಲಜಿಸ್ಟ್ (ಕೀಟ ಶಾಸ್ತ್ರಜ್ಞ) ಸಹಾಯಕ ಹುದ್ದೆಯನ್ನು ನೀಡಿ ಹೊಸ ಜವಾಬ್ದಾರಿ ಕಲ್ಪಿಸಿದ್ದಾರೆ.
ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ವಿಶೇಷ ಕಾರ್ಯದರ್ಶಿ ಅರವಿಂದ್ ಕುಮಾರ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, " ಪ್ರಥಮ ದರ್ಜೆಯಲ್ಲಿ ಎಂಎಸ್ಸಿ ಪಾಸ್ ಮಾಡಿದ್ದರೂ ಜಿಎಚ್‌ಎಂಸಿಯಲ್ಲಿ ನೈರ್ಮಲ್ಯ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದ ರಜನಿ ಎಂಬ ಮಹಿಳೆಗೆ ಪುರಸಭೆಯಲ್ಲಿ ಸಹಾಯಕ ಕೀಟಶಾಸ್ತ್ರಜ್ಞರಾಗಿ ಕೆಲಸ ನೀಡಲಾಗಿದೆ. ಈ ಬಗ್ಗೆ ಈಟಿವಿ ಭಾರತ ಹಾಗೂ ಈನಾಡು ಸುದ್ದಿಯನ್ನ ಪ್ರಕಟಿಸಿ ಗಮನ ಸೆಳೆದಿತ್ತು ಎಂದಿದ್ದಾರೆ.
ಜೊತೆಗೆ ಅರವಿಂದ್ ಅವರ ಟ್ವೀಟ್ ಅನ್ನು ಕೆಟಿಆರ್ ಉಲ್ಲೇಖಿಸಿ ಮಹಿಳೆಗೆ ಶುಭ ಹಾರೈಸಿದ್ದಾರೆ. "ನೀವು ನಿರ್ವಹಿಸಲಿರುವ ಹೊಸ ಜವಾಬ್ದಾರಿಗೆ ನನ್ನ ಹಾರೈಕೆ" ಎಂದು ಹೇಳಿದ್ದಾರೆ.
ರಜನಿ ಬದುಕಿನ ಕಥೆ ಹೀಗಿದೆ!
ರಜನಿ, ವರಂಗಲ್ ಜಿಲ್ಲೆಯ ಬಡ ಕುಟುಂಬದ ಮಹಿಳೆ. ಆಕೆಯ ಪೋಷಕರು ರೈತರಾಗಿದ್ದು, ಕಷ್ಟಪಟ್ಟು ತನ್ನ ವಿದ್ಯಾಭ್ಯಾಸವನ್ನು ಉತ್ತಮವಾಗಿ ಮುಗಿಸಿದಳು. ಎಂಎಸ್ಸಿಯನ್ನು ಸಾವಯವ ರಸಾಯನಶಾಸ್ತ್ರ ವಿಭಾಗದಲ್ಲಿ ಪೂರ್ಣಗೊಳಿಸಿದ್ದಾರೆ. 2013ರಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ, ಆಕೆ ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಿಎಚ್‌ಡಿಗೆ ಅರ್ಹತೆ ಪಡೆದಿದ್ದರು. ಅದೇ ಸಂದರ್ಭದಲ್ಲಿ ರಜಿನಿಗೆ ವಕೀಲರೊಬ್ಬರ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಜಿನಿ ಪತಿ ಜತೆಗೆ ಹೈದರಾಬಾದ್ಗೆ ಆಗಮಿಸಿದ್ದರು.
ಇದ್ದಕ್ಕಿದ್ದಂತೆ ಪತಿಗೆ ಬಂದ ಸಂಕಷ್ಟ
ಈ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದು, ಜೀವನ ಉತ್ತಮವಾಗಿ ನಡೆಯುತ್ತಿತ್ತು. ಅಷ್ಟೇ ಅಲ್ಲದೆ ರಜನಿ ಕುಟುಂಬವನ್ನು ನೋಡಿಕೊಳ್ಳುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಳು. ಆದರೆ ಅವರ ಗಂಡನಿಗೆ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಿ ಕೆಲಸ ಮಾಡದ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಕುಟುಂಬದ ಹೊಣೆ ರಜನಿ ಹೆಗಲಿಗೆ
ಈ ಸಂದರ್ಭದಲ್ಲಿ ಕುಟುಂಬವನ್ನು ನಡೆಸುವ ಹೊರೆ ರಜನಿ ಮೇಲೆಯೇ ಬಿತ್ತು. ತನ್ನ ಇಬ್ಬರು ಹೆಣ್ಣು ಮಕ್ಕಳು, ಚಿಕ್ಕಮ್ಮ ಮತ್ತು ಗಂಡನನ್ನು ನೋಡಿಕೊಳ್ಳಲು ಅವಳು ಕೆಲಸ ಹುಡುಕಲು ಆರಂಭಿಸಿದರು ರಜಿನಿ. ಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡಿಯೂ ಜೀವನ ನಡೆಸಲು ಮುಂದಾಗಿದ್ದರು. ಕೊನೆಗೆ ಗುತ್ತಿಗೆ ನೈರ್ಮಲ್ಯ ಕೆಲಸಗಾರನಾಗಿ ಜಿಎಚ್‌ಎಂಸಿಗೆ ಸೇರಿಕೊಂಡು ಜೀವನ ನಡೆಸಲು ಪ್ರಾರಂಭಿಸಿದರು. ತಿಂಗಳಿಗೆ 10 ಸಾವಿರ ರೂ. ಸಂಬಳದಲ್ಲೇ ಸಂಸಾರದ ನೊಗ ತೂಗಿಸಿಕೊಂಡು ಹೋಗುತ್ತಿದ್ದರು.
ಎಂಎಸ್ಸಿ ಮಾಡಿದರೂ,ಕೆಟ್ಟ ಪರಿಸ್ಥಿತಿಯಿಂದಾಗಿ ಜಿಎಚ್‌ಎಂಸಿಯಲ್ಲಿ ಕೆಲಸ ಮಾಡುತ್ತಿದ್ದ ರಜನಿ ವಿಚಾರ ಈ ಟಿವಿ ಭಾರತ ಹಾಗೂ ಈ ನಾಡು ಗಮನ ಸೆಳೆದಿತ್ತು. ಈ ಬಗ್ಗೆ ಸುದ್ದಿ ಸಹ ಮಾಡಲಾಗಿತ್ತು. ಈ ಸುದ್ದಿ ಪ್ರಕಟಗೊಂಡು ಹಲವರ ಗಮನವನ್ನೂ ಸೆಳೆದಿತ್ತು. ಪರಿಣಾಮ ರಜನಿಗೆ ಸಹಾಯ ಮಾಡಲು ಹಲವರು ಮುಂದೆ ಬಂದಿದ್ದರು. ಇದೇ ವೇಳೆ ಈ ಸುದ್ದಿ ತೆಲಂಗಾಣ ಸರ್ಕಾರದ ಗಮನಕ್ಕೂ ಬಂದಿದ್ದರಿಂದ ರಜಿನಿಗೆ ಉತ್ತಮ ಉದ್ಯೋಗ ನೀಡಿ ಬದುಕಿಗೆ ಬೆಳಕು ಕಲ್ಪಿಸಿದೆ.