ಕೊಚ್ಚಿ(ಕೇರಳ):ಸಾಧನೆ ಮಾಡಬೇಕು ಎಂಬ ಛಲ, ಹಂಬಲ ಇರುವವರಿಗೆ ಯಾವುದೇ ಸಮಸ್ಯೆ, ತೊಂದರೆಗಳಿದ್ದರೂ ಅಡ್ಡಿಯಾಗಲ್ಲ. ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ನಡೆದು ಹೋಗಿವೆ. ಸದ್ಯ ಹುಟ್ಟು ಅಂಧತ್ವ ಹೊಂದಿದ್ದ ಬಾಲೆಯೊಬ್ಬರು ಸಿಬಿಎಸ್ಇ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಬರೋಬ್ಬರಿ 496 ಅಂಕ ಗಳಿಕೆ ಮಾಡಿದ್ದಾರೆ. ಈ ಮೂಲಕ ಸಾವಿರಾರು ವಿಶೇಷ ಚೇತನ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ.
ಈಗಾಗಲೇ ಯೂಟ್ಯೂಬರ್, ಗಾಯಕ ಮತ್ತು ಪ್ರೇಕರ ಭಾಷಣಕಾರರಾಗಿ ಕೆಲಸ ಮಾಡ್ತಿರುವ ಹನ್ನಾ ಸೈಮನ್ ಈ ಸಾಧನೆ ಮಾಡಿದ್ದಾರೆ. ಸಿಬಿಎಸ್ಇ 12ನೇ ತರಗತಿಯಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದ್ದು, 500 ಅಂಕಗಳಿಗೆ 496 ಮಾರ್ಕ್ಸ್ ಪಡೆದುಕೊಂಡಿದ್ದಾರೆ.
ಕೇರಳದ ಕೊಚ್ಚಿಯಲ್ಲಿರುವ ಹನ್ನಾ ಮೈಕ್ರೋಫ್ಥಾಯಾದಿಂದ(Microphthalmia) ಬಳಲುತ್ತಿದ್ದಾರೆ. ಈಗಾಗಲೇ ವೆಲ್ಕಮ್ ಹೋಮ್ ಎಂಬ ಪುಸ್ತಕ ಬಿಡುಗಡೆ ಮಾಡಿರುವ ಅವರು, ಅದರಲ್ಲಿ ಆರು ಯುವ ಸಾಧಕರಿಯರ ಬಗ್ಗೆ ಬರೆದಿದ್ದಾರೆ. ಶಾಲೆಯಲ್ಲಿ ಕಿರುಕುಳಕ್ಕೊಳಗಾಗಿರುವುದಾಗಿ ವಿದ್ಯಾರ್ಥಿನಿ ಹೇಳಿಕೊಂಡಿದ್ದು, ಅನೇಕ ರೀತಿಯ ಸವಾಲು ಮೆಟ್ಟಿನಿಂತಿದ್ದಾರೆ. ಬಾಲ್ಯದಿಂದ ಅನೇಕ ತೊಂದರೆ ಅನುಭವಿಸಿದ್ದರಿಂದ ಇದೀಗ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ.