ತಿರುವನಂತಪುರಂ (ಕೇರಳ):ಸಾರ್ವಜನಿಕರಿಗೆ ಬಂದೂಕು ತರಬೇತಿ ನೀಡುವ ಯೋಜನೆಯನ್ನು ಕೇರಳ ಪೊಲೀಸರು ಜಾರಿ ತರಲು ಮುಂದಾಗಿದ್ದಾರೆ. ಜೊತೆಗೆ ಬಂದೂಕು ತರಬೇತಿಗಾಗಿ ಪಠ್ಯಕ್ರಮವನ್ನೂ ಅಭಿವೃದ್ಧಿಪಡಿಸಲಾಗಿದೆ.
ಖಾಸಗಿ ವ್ಯಕ್ತಿಗಳು ಬಂದೂಕು ಲೈಸನ್ಸ್ ಪಡೆದುಕೊಂಡರೆ ಆತ್ಮರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳಬಹುದು. ಆದರೆ, ಲೈಸನ್ಸ್ ಹೊಂದಿರುವವರಲ್ಲಿ ಎಷ್ಟೋ ಮಂದಿಗೆ ಬಂದೂಕು ಸಂರಕ್ಷಣೆ ಹೇಗೆ ಮಾಡಬೇಕು ಮತ್ತು ಅದನ್ನು ಬಳಲುಸುವುದು ಹೇಗೆ ಎಂಬುವುದು ಸೇರಿದಂತೆ ಹಲವು ಪ್ರಶ್ನೆಗಳು ಕಾಡುತ್ತಿರುತ್ತವೆ. ಆದ್ದರಿಂದ ಶಸ್ತ್ರಾಸ್ತ್ರ ನಿಯಮದಡಿ ಪರವಾನಗಿಗಾಗಿ ಅರ್ಜಿ ಸಲ್ಲಿಸುವವರಿಗೆ 13 ದಿನಗಳ ಶಸ್ತ್ರಾಸ್ತ್ರ ತರಬೇತಿ ನೀಡಲು ಕೇರಳ ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ಕುರಿತು ಮಾರ್ಚ್ 23ರಂದು ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪಠ್ಯ ಹೇಗಿರುತ್ತದೆ?: ಬಂದೂಕು ತರಬೇತಿಯನ್ನು ಕ್ರಮಬದ್ಧವಾಗಿ ನೀಡಲು ಪೊಲೀಸ್ ಇಲಾಖೆ ಪಠ್ಯಕ್ರಮ ಸಿದ್ಧಪಡಿಸಿದೆ. ಇದರಲ್ಲಿ ಪಠ್ಯ ಮತ್ತು ಪ್ರಯೋಗಿಕ ತರಗತಿಗಳು ಸಹ ಇರಲಿವೆ. ಪಠ್ಯದಲ್ಲಿ ನಾಲ್ಕು ವಿಭಾಗಗಳನ್ನು ಸಂಯೋಜಿಸಲಾಗಿದೆ.
1. ಬಂದೂಕು ಮತ್ತು ಮದ್ದುಗುಂಡುಗಳ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ. 2. ಅವುಗಳ ಸಂರಕ್ಷಣೆ ಮತ್ತು ಸಾಗಣೆ. 3. ಶಸ್ತ್ರಾಸ್ತ್ರ ಕಾಯಿದೆ ಮತ್ತು ನಿಯಮಗಳ ಪ್ರಮುಖ ನಿಬಂಧನೆಗಳು. 4. ಬಂದೂಕು ಬಳಕೆ ಬಗ್ಗೆ ಮಾಹಿತಿ.. ಹೀಗೆ ಪಠ್ಯ ಇರುತ್ತದೆ. ಇದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಆರು ಸೆಷನ್ಸ್ಗಳಲ್ಲಿ ಇರಲಿದೆ.