ತಿರುವನಂತಪುರ: ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ ದೇಶದ ಏಕತೆಗೆ ಭಂಗ ತರುವ ಹೇಳಿಕೆ ನೀಡಿದ್ದು, ಅವರ ವಿರುದ್ಧ ಸಂವಿಧಾನದ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಪತ್ರ ಬರೆದಿದ್ದಾರೆ. ಆದರೆ ಮುಖ್ಯಮಂತ್ರಿಗಳು ರಾಜ್ಯಪಾಲರ ನಿರ್ದೇಶನವನ್ನು ತಳ್ಳಿಹಾಕಿದ್ದಾರೆ.
ಸಚಿವ ಬಾಲಗೋಪಾಲ ಮೇಲೆ ತಮ್ಮ ವಿಶ್ವಾಸ ಅಬಾಧಿತವಾಗಿದೆ ಎಂದು ಹೇಳಿ ಮುಖ್ಯಮಂತ್ರಿ ವಿಜಯನ್ ರಾಜ್ಯಪಾಲರಿಗೆ ತಿರುಗಿ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ ರಾಜ್ಯಪಾಲರು ಬಾಲಗೋಪಾಲ್ ಅವರನ್ನು ಎಲ್‌ಡಿಎಫ್ ಕ್ಯಾಬಿನೆಟ್‌ನಿಂದ ತೆಗೆದುಹಾಕುವಂತೆ ಅಥವಾ ವಜಾ ಮಾಡುವಂತೆ ಸ್ಪಷ್ಟವಾಗಿ ಹೇಳಿಲ್ಲ. ಆದರೂ ಅವರ ಪತ್ರದ ಸಾರ ಇದೇ ಆಗಿರುವಂತೆ ಕಾಣಿಸುತ್ತದೆ.