ಕೊಚ್ಚಿ (ಕೇರಳ):ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಮಾಡುವ ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ ಸುದ್ದಿಗಳನ್ನು ನೋಡಿದ್ದೇವೆ. ಆದರೆ, ಇಲ್ಲಿ ಏರ್ ಇಂಡಿಯಾ ವಿಮಾನ ಸಿಬ್ಬಂದಿಯೇ ಈ ದುಷ್ಕೃತ್ಯದಲ್ಲಿ ತೊಡಗಿದ್ದು ಬೆಳಕಿಗೆ ಬಂದಿದೆ. ಚಾಲಾಕಿ ಆರೋಪಿಯನ್ನು ಬಂಧಿಸಿ ಆತನಿಂದ 1487 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ವಯನಾಡು ಮೂಲದ ಶಫಿ ಬಂಧಿತ ಆರೋಪಿ. ಬಹ್ರೇನ್- ಕೋಝಿಕೋಡ್- ಕೊಚ್ಚಿಗೆ ಸಂಪರ್ಕ ಕಲ್ಪಿಸುವ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಸಿಬ್ಬಂದಿಯಾಗಿದ್ದ ಶಫಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂಬ ಗೌಪ್ಯ ಮಾಹಿತಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್ಗೆ ಸಿಕ್ಕ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು.
"ಕೈ" ಕೊಟ್ಟ ಚಾಲಾಕಿ ಸಿಬ್ಬಂದಿ ಜಾಣ್ಮೆ:ಚಾಲಾಕಿ ವಿಮಾನ ಸಿಬ್ಬಂದಿ ಚಿನ್ನ ಕಳ್ಳ ಸಾಗಣೆಗೆ ಮಾಡಿದ ಉಪಾಯ "ಕೈ" ಕೊಟ್ಟಿದೆ. ಕೈಗಳಿಗೆ ಚಿನ್ನವನ್ನು ಸುತ್ತಿ ಅದಕ್ಕೆ ಅಂಗಿಯ ತೋಳನ್ನು ಮುಚ್ಚಿಕೊಂಡಿದ್ದ. ಸಾಮಾನ್ಯವಾಗಿ ವಸ್ತ್ರ ಧರಿಸಿದಂತೆ ಆತ ವರ್ತಿಸಿದ್ದ. ಆದರೆ, ಕಿರಾತಕನ ಕಳ್ಳತನದ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಕೈಯಲ್ಲಿ ಚಿನ್ನ ಸುತ್ತಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ಅರಿತಿದ್ದ ಪೊಲೀಸರು ಕೊಚ್ಚಿ ನಿಲ್ದಾಣದಲ್ಲಿ ವಿಮಾನ ಇಳಿದ ಬಳಿಕ ವಶಕ್ಕೆ ಪಡೆದು ತಪಾಸಿಸಿದಾಗ ಸಿಬ್ಬಂದಿಯ ಕಳ್ಳಾಟ ಬಹಿರಂಗವಾಗಿದೆ. ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಲೆಗೆ ಬಿದ್ದ ಪ್ರಯಾಣಿಕರು:ಇನ್ನೊಂದೆಡೆ, ಸಿಂಗಾಪುರದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಪ್ರಯಾಣಿಕರಲ್ಲಿ 3.32 ಕೋಟಿ ರೂ. ಮೌಲ್ಯದ 6.8 ಕೆಜಿ ತೂಕದ ಚಿನ್ನವನ್ನು ಚೆನ್ನೈ ಕಸ್ಟಮ್ಸ್ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ಅಲ್ಲದೇಮ ಇಬ್ಬರನ್ನೂ ಬಂಧಿಸಿದ್ದಾರೆ. ಪ್ರಯಾಣಿಕರು ಸಿಂಗಾಪುರದಿಂದ AI-347 ಮತ್ತು 6E-52 ಮೂಲಕ ಚೆನ್ನೈಗೆ ಬಂದಿಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.