ನವದೆಹಲಿ:ವಿಧಾನಸಭಾಚುನಾವಣಾ ಪ್ರಚಾರಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳಲಿರುವದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಗೈರಾಗಿದ್ದಾರೆ. ಬೆಳಿಗ್ಗೆ 11 ಗಂಟೆಗೆ ದೆಹಲಿಯ ಕಚೇರಿಯಲ್ಲಿ ಹೇಳಿಕೆ ದಾಖಲಿಸಲು ಹಾಜರಾಗುವಂತೆ ಇಡಿ ಸಮನ್ಸ್ ನೀಡಿತ್ತು.
ಇದೇ ವೇಳೆ, ತನಗೆ ನೀಡಿದ ನೋಟಿಸ್ ಹಿಂಪಡೆಯುವಂತೆ ಜಾರಿ ನಿರ್ದೇಶನಾಲಯಕ್ಕೆ ಅರವಿಂದ್ ಕೇಜ್ರಿವಾಲ್ ಪತ್ರ ಬರೆದಿದ್ದಾರೆ. ತನಗೆ ನೀಡಿದ ನೋಟಿಸ್ ''ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ'' ಎಂದು ಅವರು ಆರೋಪಿಸಿದ್ದಾರೆ. ''ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಪ್ರಚಾರ ಮಾಡುವುದನ್ನು ತಡೆಯುವ ಗುರಿ ಇದರ ಹಿಂದಿದೆ'' ಎಂದು ಮುಖ್ಯಮಂತ್ರಿ ಕಚೇರಿ ಆಪಾದಿಸಿದೆ. ''ಬಿಜೆಪಿಯ ಒತ್ತಾಯದ ಮೇರೆಗೆ ತಮಗೆ ನೋಟಿಸ್ ಕಳುಹಿಸಲಾಗಿದೆ'' ಎಂದೂ ಕೇಜ್ರಿವಾಲ್ ದೂರಿದ್ದಾರೆ.
ಆಮ್ ಆದ್ಮಿ ಪಕ್ಷದ ಸಂಚಾಲಕರೂ ಆಗಿರುವ ಕೇಜ್ರಿವಾಲ್, ಚುನಾವಣಾ ಪ್ರಚಾರಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳಲಿದ್ದಾರೆ. ಸಿಂಗ್ರೌಲಿಯಲ್ಲಿ ಸಿಎಂ ಭಗವಂತ್ ಮಾನ್ ಜೊತೆಗೆ ರೋಡ್ ಶೋ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
''ಬಿಜೆಪಿ ಎಎಪಿಯನ್ನು ಮುಗಿಸುವ ಕಾರ್ಯಕ್ಕೆ ಮುಂದಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ರನ್ನು ಇಡಿ ನವೆಂಬರ್ 2 ರಂದು ಬಂಧಿಸಲಿದೆ ಎಂದು ದೆಹಲಿ ಸಚಿವ ಅತಿಶಿ ಬುಧವಾರ ಆತಂಕ ವ್ಯಕ್ತಪಡಿಸಿದ್ದರು. ಎಎಪಿಯನ್ನು ರಾಜಕೀಯವಾಗಿ ದುರ್ಬಲಗೊಳಿಸಲು ಮೋದಿ ಸರ್ಕಾರ ತನಿಖಾ ಸಂಸ್ಥೆಗಳು ಮತ್ತು ಕಾನೂನುಬಾಹಿರ ತಂತ್ರಗಳನ್ನು ಬಳಸುತ್ತಿದೆ'' ಎಂದು ಅವರು ಆರೋಪಿಸಿದ್ದರು.
ಎಎಪಿ ಸಚಿವರ ಮೇಲೆ ಇಡಿ ದಾಳಿ:ಇಂದು ಬೆಳಿಗ್ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ದೆಹಲಿ ಸಚಿವ, ಎಎಪಿ ನಾಯಕ ರಾಜ್ ಕುಮಾರ್ ಆನಂದ್ ಅವರಿಗೆ ಸಂಬಂಧಿಸಿದ ನಿವಾಸಗಳು ಸೇರಿದಂತೆ ವಿವಿಧ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದರು. 7.30 ವೇಳೆಯಿಂದ ರಾಜಧಾನಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಸಚಿವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಅಧಿಕಾರಿಗಳು ತೀವ್ರ ಶೋಧ ಕೈಗೊಂಡರು ಎಂದು ಇಡಿ ಮೂಲಗಳು ಹೇಳಿವೆ. ದಾಳಿಯ ಸಮಯದಲ್ಲಿ, ಸಿಆರ್‌ಪಿಎಫ್‌ನ ತಂಡ ಭದ್ರತೆ ಒದಗಿಸಿತ್ತು.
ಸಚಿವ ಸೌರಭ್ ಭಾರದ್ವಾಜ್, ಗೋಪಾಲ್ ರೈ, ಅತಿಶಿ ಮತ್ತು ಸಂಸದ ರಾಘವ್ ಚಡ್ಡಾ ಕೂಡ ಇಡಿ ವಿಚಾರಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ್ದು, ''ಆಮ್ ಆದ್ಮಿ ಪಕ್ಷದ ಯಾವುದೇ ಕಾರ್ಯಕರ್ತ ಹೆದರುವುದಿಲ್ಲ. ಪಕ್ಷವನ್ನು ನಾಶ ಮಾಡಲು ಬಿಜೆಪಿ ಮುಂದಾಗಿದೆ'' ಎಂದು ಆರೋಪಿಸಿದರು.
ಇದನ್ನೂ ಓದಿ:ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಯನ ಪ್ರವಾಸ: ಗುವಾಹಟಿಗೆ ಹೊರಟ ರಾಜ್ಯದ ನಾಯಕರು