ನವದೆಹಲಿ:ನಾನು ಜನತೆಯ ಅಚ್ಚುಮೆಚ್ಚಿನ ಮಗ. ನನ್ನ ಮೇಲೆ ಜನರು ತೋರುತ್ತಿರುವ ಪ್ರೀತಿಯನ್ನು ಸಹಿಸದೆ ಬಿಜೆಪಿ ನನಗೆ ತೊಂದರೆ ನೀಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿ ಮುನ್ಸಿಪಲ್ ಚುನಾವಣೆ (ಎಂಸಿಡಿ) ಮತ್ತು ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಎದುರು ನೇರ ಹಣಾಹಣಿಗೆ ಇಳಿದಿರುವ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಮತ್ತು ಅತ್ಯಂತ ಭ್ರಷ್ಟ ಪಕ್ಷ ಎಂದು ಬಿಜೆಪಿ ನಾಯಕರು ಹೀಗಳೆದಿದ್ದಾರೆ.
ಪಂಜಾಬ್ ಚುನಾವಣೆಗೆ ಮುನ್ನ ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಗೃಹ ಸಚಿವ ಅಮಿತ್ ಶಾ ಕೂಡ ಈ ಸಂಬಂಧ ತನಿಖೆಗೆ ಆಗ್ರಹಿಸಿದ್ದರು. ಆದರೆ ಏನಾಯಿತು ಈಗ? ಗುಜರಾತ್ ಚುನಾವಣೆ ಮತ್ತು ಎಂಸಿಡಿ ಚುನಾವಣೆಗೆ ಮುನ್ನ ಅವರು ಕೇಜ್ರಿವಾಲ್ ಭ್ರಷ್ಟ ಎನ್ನುತ್ತಿದ್ದಾರೆ. ಕೇಜ್ರಿವಾಲ್ ಭ್ರಷ್ಟ ಅಥವಾ ಭಯೋತ್ಪಾದಕ ಎಂದರೆ ಬಂಧಿಸಬೇಕು ಅಲ್ಲವೇ ಎಂದು ಟ್ವೀಟ್ ಮೂಲಕ ದೆಹಲಿ ಸಿಎಂ ಪ್ರಶ್ನಿಸಿದ್ದಾರೆ.