ಕೇದಾರನಾಥ(ಉತ್ತರಾಖಂಡ) :ಕೇದಾರನಾಥ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಲೋಕಾರ್ಪಣೆ ಮಾಡಿದರು. ಅಲ್ಲದೇ, ಆದಿಗುರು ಶಂಕರಾಚಾರ್ಯರ ಸಮಾಧಿ ಹಾಗೂ ಮೂರ್ತಿಯನ್ನು ಅನಾವರಣಗೊಳಿಸಿದರು.
ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆಯೂ ಪರಿಶೀಲನೆ ನಡೆಸಿದ ಪ್ರಧಾನಿ, ಕೇದಾರನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಾಮಚರಿತ ಮಾನಸದ ಒಂದು ಶ್ಲೋಕವನ್ನೂ ಉಚ್ಛರಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲವು ಅನುಭವಗಳು ಅಲೌಕಿಕವಾಗಿವೆ. ಅವುಗಳನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಕೇದಾರನಾಥದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಮುಂದೆ ಅರ್ಚಕರು ಮತ್ತು ಭಕ್ತರಿಗೆ ಅನುಕೂಲವಾಗಲಿವೆ ಎಂದು ತಿಳಿಸಿದರು.
ಚಾರ್ಧಾಮ್ ರಸ್ತೆ ಕಾಮಗಾರಿ ಯೋಜನೆ ತ್ವರಿತಗತಿಯಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಭಕ್ತರು ಕೇದಾರನಾಥಕ್ಕೆ ಕೇಬಲ್ ಕಾರಿನ ಮೂಲಕ ಆಗಮಿಸಲಿದ್ದಾರೆ ಎಂದರು.
ಕೇದಾರನಾಥದ 2013ರ ಪರಿಸ್ಥಿತಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಭೂಕಂಪ ಮತ್ತು ಪ್ರವಾಹದಿಂದ ಆದ ಹಾನಿಯನ್ನು ಊಹಿಸಿಕೊಳ್ಳಲು ಅಸಾಧ್ಯ. ಕೇದಾರನಾಥಕ್ಕೆ ಆದ ಹಾನಿಯಿಂದ ಕೇದಾರಧಾಮ ಮತ್ತೆ ಮೊದಲಿನಂತೆ ಕಳೆ ಪಡೆಯುವುದೇ ಎಂಬ ಅನುಮಾನ ಭಕ್ತರಲ್ಲಿ ಇತ್ತು. ಆದರೆ, ಇಂದು ಅದು ಸಾಧ್ಯವಾಗಿದೆ. ಕೇದಾರನಾಥ ಮತ್ತು ಶಂಕರಾಚಾರ್ಯರ ಆಶೀರ್ವಾದದಿಂದ ಕೇದಾರಧಾಮ ಮತ್ತೆ ಮೊದಲ ರೂಪ ಪಡೆದಿದೆ ಎಂದು ಹೇಳಿದರು.
ಭೂಕಂಪ ಮತ್ತು ಪ್ರವಾಹದಂತ ಹಾನಿಯನ್ನು ಮೆಟ್ಟಿನಿಂತು ಕೇದಾರಧಾಮ ಇಂದು ಹೊಸ ರೂಪ ಪಡೆಯುತ್ತಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.