ನವದೆಹಲಿ : ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿದೇಶಕ್ಕೆ ಹೋಗಲು ಅನುಮತಿ ಕೋರಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಶೇಷ ನ್ಯಾಯಾದೀಶ ವಿಕಾಸ್ ಧಲ್ ಅವರು ಈ ಅರ್ಜಿಯನ್ನು ನಾಳೆ ಅಂದರೆ ನವೆಂಬರ್ 25 ರಂದು ವಿಚಾರಣೆ ನಡೆಸಲಿದ್ದಾರೆ.
ಶುಕ್ರವಾರ ಮನೀಶ್ ಜೈನ್ ಅವರು ಇಡಿ ಪರ ವಾದ ಮಂಡಿಸಲಿದ್ದು, ಡಿ ಕೆ ಶಿವಕುಮಾರ್ ಪರವಾಗಿ ವಕೀಲ ಮಯಾಂಕ್ ಜೈನ್ ಅವರು ಪೀಠದ ಮುಂದೆ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರು ನವೆಂಬರ್ 29 ರಿಂದ ಡಿಸೆಂಬರ್ 3 ರವರೆಗೆ ದುಬೈಗೆ ಹೋಗಲು ಅನುಮತಿ ಕೋರಿದ್ದಾರೆ. ಆಗಸ್ಟ್ 2 ರಂದು ನ್ಯಾಯಾಲಯವು ಈ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು ನೀಡಿತ್ತು. ಸಚಿನ್ ನಾರಾಯಣ್, ಸುನೀಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್ ಜಾಮೀನು ಪಡೆದವರಾಗಿದ್ದಾರೆ.
ಈ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಈಗಾಗಲೇ ಜಾಮೀನು ನೀಡಿದೆ. ಮೇ 31 ರಂದು ಡಿ ಕೆ ಶಿವಕುಮಾರ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಇಡಿ ಸಲ್ಲಿಸಿದ್ದ ಚಾರ್ಜ್ ಶೀಟ್ ಅನ್ನು ನ್ಯಾಯಾಲಯವು ವಿಚಾರಣೆಗೆ ತೆಗೆದುಕೊಂಡಿತ್ತು. 26 ಮೇ 2022 ರಂದು ಇಡಿ ಎಲ್ಲ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ನ್ಯಾಯಾಲಯವು 31 ಮೇ 2022 ರಂದು ಚಾರ್ಜ್ ಶೀಟ್ ಪರಿಗಣಿಸಿತು.
ಡಿ ಕೆ ಶಿವಕುಮಾರ್ ಅವರನ್ನು 3 ಸೆಪ್ಟೆಂಬರ್ 2019 ರಂದು ಇಡಿ ಬಂಧಿಸಿತ್ತು. ಅಕ್ಟೋಬರ್ 23, 2019 ರಂದು ದೆಹಲಿ ಹೈಕೋರ್ಟ್ ಡಿ ಕೆ ಶಿವಕುಮಾರ್ ಅವರಿಗೆ 25 ಲಕ್ಷ ರೂಪಾಯಿ ಬಾಂಡ್ ಮೇಲೆ ಜಾಮೀನು ನೀಡಿತ್ತು. ಡಿ ಕೆ ಶಿವಕುಮಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದನ್ನು ಇಡಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 2019ರ ನವೆಂಬರ್ 15ರಂದು ಇಡಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.
ಇದನ್ನೂ ಓದಿ:ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ತನಿಖೆಗೆ ನೀಡಿದ್ದ ಆದೇಶ ವಾಪಸ್ ಪಡೆದ ಸರ್ಕಾರ