ನವದೆಹಲಿ :ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಪಶ್ಚಿಮ ಬಂಗಾಳದಲ್ಲಿ ಉಳಿದಿರುವ ಮೂರು ಹಂತದ ಚುನಾವಣೆಗಳಿಗೆ ಬಿಜೆಪಿ ಬೃಹತ್ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ಸ್ಥಗಿತಗೊಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ಚುನಾವಣಾ ರ್ಯಾಲಿ ಸಂಬಂಧ ಹೊಸ ರೂಪುರೇಷೆ ತಯಾರಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಇಂದು ಸಭೆ ಕರೆದಿದ್ದರು. ಈ ವೇಳೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ಕೇವಲ 500 ಜನರನ್ನು ಸೇರಿಸಿಕೊಂಡು ತೆರೆದ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿಯನುಸಾರ ಸಾರ್ವಜನಿಕ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ರು.
ಇನ್ನು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆರು ಕೋಟಿ ಮಾಸ್ಕ್ಗಳು ಮತ್ತು ಸ್ಯಾನಿಟೈಸರ್ ವಿತರಣೆಯ ಗುರಿ ನಿಗದಿಪಡಿಸಿದೆ. ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ನಿರ್ದೇಶನದ ಮೇರೆಗೆ, ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ಮೀಸಲಾದ ಕೋವಿಡ್ ಹೆಲ್ಪ್‌ಡೆಸ್ಕ್ ಮತ್ತು COVID ಸಹಾಯವಾಣಿ ತೆರೆಯುತ್ತದೆ ಮತ್ತು 'ಅಪ್ನಾ ಬೂತ್-ಕೊರೊನಾ ಮುಕ್ತ್' (ನನ್ನ ಬೂತ್, ಕೊರೊನಾ ಮುಕ್ತ) ಅಭಿಯಾನವನ್ನು ಬಿಜೆಪಿ ಪ್ರಾರಂಭಿಸುತ್ತದೆ.
ಎಂಟು ಹಂತದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಐದು ಹಂತಗಳು ಪೂರ್ಣಗೊಂಡಿವೆ. ರಾಜ್ಯ ವಿಧಾನಸಭಾ ಚುನಾವಣೆಯ ಆರನೇ ಹಂತ ಏಪ್ರಿಲ್ 22ರಂದು ನಿಗದಿಯಾಗಿದೆ. ಏಳನೇ ಮತ್ತು ಎಂಟನೇ ಹಂತದ ಮತದಾನ ಏಪ್ರಿಲ್ 26 ಮತ್ತು ಏಪ್ರಿಲ್ 29 ರಂದು ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.