ನೀಲಗಿರಿ (ತಮಿಳುನಾಡು): ಚೆನ್ನೈನ ಐಟಿ ಕಂಪೆನಿಯೊಂದರ 18 ಉದ್ಯೋಗಿಗಳು ಊಟಿಗೆ ಪ್ರವಾಸ ಹೋಗುತ್ತಿದ್ದ ಟೆಂಪೋ ಟ್ರಾವೆಲ್ಲರ್ ನಿಯಂತ್ರಣ ಕಳೆದುಕೊಂಡು 50 ಅಡಿ ಆಳದ ಕಂದಕಕ್ಕೆ ಉರುಳಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 17 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಇವರು ಚೆನ್ನೈನ ಶೋಲಿಂಗನಲ್ಲೂರಿನಲ್ಲಿರುವ ಹೆಚ್ಸಿಎಲ್ ಐಟಿ ಕಂಪೆನಿಯ ಉದ್ಯೋಗಿಗಳು ಎಂದು ತಿಳಿದು ಬಂದಿದೆ. 14 ಪುರುಷರು ಹಾಗೂ 4 ಮಹಿಳೆಯರು ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಶನಿವಾರ ರಾತ್ರಿ ನೀಲಗಿರಿ ಜಿಲ್ಲೆಯ ಕಲ್ಹಟ್ಟಿ ಬಳಿಯ ಖಾಸಗಿ ಹೋಟೆಲ್ನಲ್ಲಿ ತಂಗಲು ತೆರಳಿದ್ದಾರೆ. ಈ ಸಂದರ್ಭದಲ್ಲಿ 15ನೇ ಹೇರ್ಪಿನ್-ಬೆಂಡ್ ಪ್ರದೇಶ ತಲುಪಿದಾಗ ವಾಹನ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬಿದ್ದಿದೆ.