ಬೆಂಗಳೂರು: ಭತ್ತ ಬೆಳೆಯುವ ಪ್ರದೇಶದ ಸಹಯೋಗ ಚಟುವಟಿಕೆಗಳಿಗೆ ಮತ್ತು ಉಪಗ್ರಹ ದತ್ತಾಂಶವನ್ನು ಬಳಸಿಕೊಂಡು ಗಾಳಿಯ ಗುಣಮಟ್ಟ ಮಾಪನ ಮಾಡುವ ವ್ಯವಸ್ಥೆ ಕುರಿತು ಇಸ್ರೋ ಹಾಗೂ ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (ಜಾಕ್ಸಾ) ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿವೆ.
ವರ್ಚ್ಯುಯಲ್ ಸಭೆಯಲ್ಲಿ ಎರಡೂ ರಾಷ್ಟ್ರಗಳ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಭಾಗಿಯಾಗಿ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿದರು. ಇಸ್ರೋ ಅಧ್ಯಕ್ಷ ಕೆ. ಶಿವನ್, ಜಪಾನ್ ಕೇಂದ್ರದ ಅಧ್ಯಕ್ಷ ಡಾ. ಹಿರೋಶಿ ತಮಕವಾ ಸೇರಿ ಸಿಬ್ಬಂದಿ ಭಾಗಿಯಾಗಿದ್ದರು. ಕಕ್ಷೆಯಿಂದ ಭೂಮಿಯ ವೀಕ್ಷಣೆ, ಚಂದ್ರನ ಕಾರ್ಯಾಚರಣೆಗೆ ಸಹಕಾರ ಸಂಬಂಧ ಎರಡೂ ಕಡೆಗಳಲ್ಲಿ ಪರಿಶೀಲನೆ ನಡೆಸಿ ಈ ಎರಡೂ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವುದಾಗಿ ಒಪ್ಪಿಕೊಳ್ಳಲಾಗಿದೆ.