ಪಠಾಣ್‌ಕೋಟ್, ಪಂಜಾಬ್ :ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರನೊಬ್ಬನನ್ನು ಯೋಧರು ಗುಂಡಿಕ್ಕಿ ಹೊಡೆದುರುಳಿಸಿದ್ದಾರೆ. ಈ ಬಗ್ಗೆ ಬಿಎಸ್‌ಎಫ್ ಅಧಿಕಾರಿಯೊಬ್ಬರು ಖಚಿತ ಮಾಹಿತಿ ನೀಡಿದ್ದಾರೆ. ಸೋಮವಾರ ನಸುಕಿನ ವೇಳೆ ಜಿಲ್ಲೆಯ ಸಿಂಬಲ್ ಸಾಕೋಲ್ ಗ್ರಾಮದ ಬಳಿ ನಡೆದಿದೆ. ಮಧ್ಯರಾತ್ರಿ 12:30 ರ ಸುಮಾರಿಗೆ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರು ಕೆಲವು ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಬಿಎಸ್ಎಫ್ ಪಡೆಗಳು ಒಳನುಸುಳುಕೋರರಿಗೆ ಅಲ್ಲೇ ನಿಲ್ಲುವಂತೆ ಸೂಚಿಸಿದ್ದಾರೆ. ಆದರೆ, ನುಸುಳುಕೋರರು ಯೋಧರ ಮಾತಿಗೆ ಕಿವಿಗೊಡದೇ ಮುನ್ನುಗ್ಗುತ್ತಿದ್ದರು. ಯೋಧರ ಎಚ್ಚರಿಕೆಯ ಸಂದೇಶಗಳನ್ನು ನಿರ್ಲಕ್ಷಿಸಿ ನುಸುಳುಕೋರರು ಗಡಿಯಲ್ಲಿ ನುಗ್ಗುತ್ತಿದ್ದರು. ಎಚ್ಚೆತ್ತ ಯೋಧರು ನುಸುಳುಕೋರರ ಮೇಲೆ ಗುಂಡು ಹಾರಿಸಿದ್ದು, ಗಡಿ ದಾಟಿದ ವ್ಯಕ್ತಿಯನ್ನು ಸ್ಥಳದಲ್ಲೇ ಕೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆಗಸ್ಟ್ 11 ರಂದು BSF ಪಡೆಗಳು ತರ್ನ್ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಒಳನುಗ್ಗುವವರನ್ನು ಹೊಡೆದುರುಳಿಸಿದ್ದರು. ಇದರೊಂದಿಗೆ, ಪಾಕಿಸ್ತಾನ - ಭಾರತ ಗಡಿಯಲ್ಲಿ ಮತ್ತೊಂದು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಯಿತು. ಆತ್ಮರಕ್ಷಣೆಗಾಗಿ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಇದು ಗಡಿ ದಾಟಿದವರ ಸಾವಿಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ನಾಳೆಯ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಮತ್ತು ತರ್ನ್ ತರನ್‌ನ ಜಿಲ್ಲೆಯಲ್ಲಿ ನಡೆದ ಘಟನೆಯ ಕೆಲ ದಿನಗಳ ಬಳಿಕ ನಡೆದಿದೆ.