ಜಮ್ಮು ಮತ್ತು ಕಾಶ್ಮೀರ: ಭಾರತದ ಗಡಿ ಪ್ರದೇಶದಲ್ಲಿ ಅದೆಷ್ಟೇ ಎಚ್ಚರಿಕೆವಹಿಸಿದರೂ ನುಸುಳುಕೋರರು ವಿಫಲ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇಂದು ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್‌ಧಾರ್ ಸೆಕ್ಟರ್ ಗಡಿಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸಿದ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ. ಈ ಕುರಿತು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಗಡಿ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿಯಾಗಿ ತಂಗ್‌ಧರ್‌ನ ಅಮ್ರೋಹಿ ಪ್ರದೇಶದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದರು. ಈ ವೇಳೆ ಒಳನುಸುಳಲು ಯತ್ನಿಸಿದ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದ ಸುತ್ತ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂಂಚ್, ರಾಜೌರಿ ಜಿಲ್ಲೆಯಲ್ಲಿ ಮುಂದುವರೆದ ಕಾರ್ಯಾಚರಣೆ: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಬರಿಯಾಮಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯಿತು. ಗುಂಡಿನ ದಾಳಿಯಲ್ಲಿ ಓರ್ವ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಇನ್ನೊಬ್ಬ ಉಗ್ರನಿಗಾಗಿ ಶೋಧ ನಡೆಯುತ್ತಿದೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಡಿಜಿಪಿ ಮುಖೇಶ್ ಸಿಂಗ್ ಹೇಳಿದರು.