ಕರ್ನಾಟಕ

karnataka

ರೈಲು ಅಪಘಾತ: ಪರಿಹಾರ ಮೊತ್ತ 10 ಪಟ್ಟು ಹೆಚ್ಚಳ ಮಾಡಿ ಕೇಂದ್ರ ರೈಲ್ವೆ ಇಲಾಖೆ ಆದೇಶ

By ETV Bharat Karnataka Team

Published : Sep 23, 2023, 2:14 PM IST

ಕೇಂದ್ರ ರೈಲ್ವೆ ಇಲಾಖೆ ರೈಲು ಅಪಘಾತಗಳ ಪರಿಹಾರ ಮೊತ್ತವನ್ನು 10 ಪಟ್ಟು ಹೆಚ್ಚಳ ಮಾಡಿ ಆದೇಶ ಮಾಡಿದೆ.

ರೈಲು ಅಪಘಾತ ಪರಿಹಾರ ಮೊತ್ತ ಹೆಚ್ಚಳ
ರೈಲು ಅಪಘಾತ ಪರಿಹಾರ ಮೊತ್ತ ಹೆಚ್ಚಳ

ನವದೆಹಲಿ: ರೈಲು ಅಪಘಾತಗಳಲ್ಲಿ ಮೃತಪಟ್ಟವರಿಗೆ ಮತ್ತು ಗಾಯಾಗೊಂಡವರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ಕೇಂದ್ರ ರೈಲ್ವೆ ಸಚಿವಾಲಯ 10 ಪಟ್ಟು ಹೆಚ್ಚಳ ಮಾಡಿ ಆದೇಶ ಮಾಡಿದೆ.

ರೈಲ್ವೆ ಕಾಯಿದೆಯ ಸೆಕ್ಷನ್ 124ರ ಅಡಿಯಲ್ಲಿ, ಈ ಹಿಂದೆ ಅಪಘಾತಗಳಲ್ಲಿ ಮೃತರಿಗೆ ರೈಲು ಮಂಡಳಿ 50,000 ರೂ ಪರಿಹಾರ ಮೊತ್ತವನ್ನು ನೀಡುತ್ತಿತ್ತು. ಇದೀಗ ಪರಿಹಾರ ಮೊತ್ತ ಹೆಚ್ಚಿಸಲಾಗಿದ್ದು, ರೈಲು ಅಪಘಾತ ಮತ್ತು ಮಾನವಸಹಿತ ಲೆವೆಲ್ ಕ್ರಾಸಿಂಗ್‌ಗಳಲ್ಲಿನ ಅವಘಡಗಳಲ್ಲಿ ಮೃತಪಟ್ಟರೆ 5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಶುಕ್ರವಾರ ತಿಳಿಸಿದೆ.

ಗಂಭೀರವಾಗಿ ಗಾಯಗೊಂಡವರಿಗೆ ಈ ಹಿಂದೆ 25,000 ರೂ ಪರಿಹಾರ ಮೊತ್ತ ನೀಡಲಾಗುತ್ತಿತ್ತು. ಇದೀಗ ಇದು 2.5 ಲಕ್ಷ ರೂ. ಹೆಚ್ಚಿಸಲಾಗಿದೆ ಮತ್ತು ಸಾಮಾನ್ಯ ಗಾಯದ ಪರಿಹಾರ ಮೊತ್ತ 5000 ರೂ. ನಿಂದ 50,000 ರೂ. ಗೆ ಏರಿಸಲಾಗಿದೆ.

ಯಾವುದಕ್ಕೆಲ್ಲ ಪರಿಹಾರ ಅನ್ವಯಿಸುವುದಿಲ್ಲ:ರೈಲು ಪ್ರಯಾಣಿಕ ಆತ್ಮಹತ್ಯೆಗೆ ಯತ್ನಿಸಿದರೆ ಅಥವಾ ಮಾಡಿಕೊಂಡರೆ, ಸ್ವಯಂ ಪ್ರೇರಿತವಾಗಿ ಉಂಟು ಮಾಡಿಕೊಂಡ ಅವಘಡಗಳು, ಅನಾರೋಗ್ಯದಿಂದ ಪ್ರಯಾಣದ ವೇಳೆ ಸಾವನ್ನಪ್ಪಿದರೆ ಪರಿಹಾರ ನೀಡಲಾಗುವುದಿಲ್ಲ. ಆರಂಭಿಕ ವೆಚ್ಚಗಳಿಗಾಗಿ ತಕ್ಷಣದ ಪರಿಹಾರವಾಗಿ 50,000 ರೂ.ನಗದು ರೂಪದಲ್ಲಿ ನೀಡಲಾಗುತ್ತದೆ. ಗಂಭೀರವಾಗಿ ಗಾಯಾಳುವಿಗೆ ನೀಡುವ ಪರಿಹಾರ ಮೊತ್ತದ ಗರಿಷ್ಠ ಅವಧಿ 12 ತಿಂಗಳಾಗಿರುತ್ತದೆ.

ರೈಲು ಅಪಘಾತದಲ್ಲಿ, ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರು 30 ದಿನಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದರೆ, ಹೆಚ್ಚುವರಿ ಪರಿಹಾರವನ್ನು ಪ್ರತಿ ದಿನಕ್ಕೆ 300 ರೂ ನಂತೆ 10 ದಿನಕ್ಕೊಮ್ಮೆ ಅಥವಾ ಡಿಸ್ಚಾರ್ಜ್​ ದಿನದಂದು ಒಟ್ಟುಗೂಡಿಸಿ ನೀಡಲಾಗುತ್ತದೆ. 6 ತಿಂಗಳು ಕಾಲ ಆಸ್ಪತ್ರೆಯಲ್ಲಿ ದಾಖಲಾದರೆ ದಿನಕ್ಕೆ 1500 ರೂ ನಂತೆ 10 ದಿನಕ್ಕೊಮ್ಮೆ ನೀಡಲಾಗುತ್ತದೆ. ತೀವ್ರವಾಗಿ ಗಾಯಗೊಂಡ ಪ್ರಯಾಣಿಕರಿಗೆ ಪರಿಹಾರದ ಗರಿಷ್ಠ ಅವಧಿಯು 12 ತಿಂಗಳಾಗಿರುತ್ತದೆ.

ಆರಂಭಿಕ ವೆಚ್ಚಗಳನ್ನು ನೋಡಿಕೊಳ್ಳಲು 50,000 ರೂ ವರೆಗಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲಾಗುತ್ತದೆ. ಉಳಿದ ಮೊತ್ತವನ್ನು ಚೆಕ್ ಅಥವಾ ಆನ್‌ಲೈನ್ ಮೂಲಕ ಪಾವತಿ ಮಾಡಲಾಗುತ್ತದೆ. 30 ದಿನಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ರೈಲ್ವೆ ವೈದ್ಯರಿಂದ ಪ್ರಮಾಣೀಕರಿಸಲಾಗುತ್ತದೆ. ಬಳಿಕ ಪರಿಹಾರ ಹಣ ನೀಡಲಾಗುತ್ತದೆ. ಕರ್ತವ್ಯ ನಿರತ ರೈಲು ಸಿಬ್ಬಂದಿಯು ಕಾರ್ಯದ ವೇಳೆ ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿದರೇ ಅಥವಾ ಗಾಯಗೊಂಡರೇ ಅವರಿಗೂ ಸಹ ಪರಿಹಾರವನ್ನು ಪಾವತಿ ಮಾಡಲಾಗುತ್ತದೆ ಎಂದು ರೈಲು ಮಂಡಳಿ ತಿಳಿಸಿದೆ.

ಇದನ್ನೂ ಓದಿ:Vande Bharat Express: ಮುಂದಿನ ತಿಂಗಳು ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ಪ್ರಧಾನಿ ಮೋದಿ ಚಾಲನೆ

ABOUT THE AUTHOR

...view details