ಸಿಕ್ಕಿಂ :ಹವಾಮಾನ ವೈಪರೀತ್ಯದಿಂದಾಗಿ ಪೂರ್ವ ಸಿಕ್ಕಿಂನ ಪರ್ವತ ಪ್ರದೇಶದಲ್ಲಿ ಬುಧವಾರ ಭಾರಿ ಹಿಮಪಾತ ಸಂಭವಿಸಿದೆ. ಹಿಮಪಾತದಲ್ಲಿ ಸಿಲುಕಿಕೊಂಡಿದ 1217 ಪ್ರವಾಸಿಗರನ್ನು ರಕ್ಷಣೆ ಮಾಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಭಾರತೀಯ ಸೇನೆ ವಿಭಾಗದ ತ್ರಿಶಕ್ತಿ ಕಾರ್ಪ್ಸ್ ನಿನ್ನೆ ತಡರಾತ್ರಿ ವರೆಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿತ್ತು. ಘಟನಾ ಸ್ಥಳದಲ್ಲಿದ್ದವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳಿದ್ದರು. ಈ ಎಲ್ಲಾ ಪ್ರವಾಸಿಗರನ್ನು ರಕ್ಷಣೆ ಮಾಡಿ ಸೇನಾ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಪ್ರವಾಸಿಗರಿಗೆ ಆಶ್ರಯ, ಬೆಚ್ಚಗಿನ ಬಟ್ಟೆ, ಬಿಸಿ ಊಟ ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇದೇ ವರ್ಷ ಮಾರ್ಚ್‌ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ 1000ಕ್ಕೂ ಹೆಚ್ಚು ಪ್ರವಾಸಿಗರನ್ನು ಸೇನೆ ರಕ್ಷಿಸಿತ್ತು. ಹಿಮಪಾತದಿಂದಾಗಿ ಪ್ರವಾಸಿಗರ ಸಂಚಾರಕ್ಕೆ ಅಡ್ಡಿಯಾಗಿದ್ದು, 200ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದವು. ಎಂಟು ಗಂಟೆಗಳ ಕಾರ್ಯಾಚರಣೆಯ ನಂತರ ಸೇನೆಯು ಎಲ್ಲಾ ಪ್ರವಾಸಿಗರನ್ನು ರಕ್ಷಿಸಿ ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ.
ಹಿಮದಲ್ಲಿ ಸಿಲುಕಿದ್ದ ಭಕ್ತನ ರಕ್ಷಣೆ: ಕೇದಾರನಾಥ ಧಾಮಕ್ಕೆ ಯಾತ್ರೆ ಕೈಗೊಂಡು ದೇವರ ದರ್ಶನ ಪಡೆಯಲು ಬಂದಿದ್ದ ಉತ್ತರ ಪ್ರದೇಶದ ಭಕ್ತರೊಬ್ಬರು ಸುಮೇರು ಪರ್ವತದ ಹಿಮದಲ್ಲಿ ಮೇ 26 ರಂದು ಸಿಲುಕಿ ಸಂಕಷ್ಟದಲ್ಲಿದ್ದರು. ತಕ್ಷಣವೇ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳು ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಪ್ರಾಣ ಕಾಪಾಡಿದ್ದರು.
ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ವೃಂದಾವನ ನಿವಾಸಿ ಸಚಿನ್ ಗುಪ್ತಾ (38) ಅವರು ಮೊದಲು ಕೇದಾರನಾಥ ದೇವಸ್ಥಾನದಿಂದ ಭೈರವನಾಥ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ ರೋಮಾಂಚನಕಾರಿ ಅನುಭವ ಪಡೆಯಲು ಪರ್ವತ ಏರುತ್ತಾ ಹೋಗಿದ್ದರು. ಸುಮೇರು ಪರ್ವತ ತಲುಪಿದಾಗ ಅಲ್ಲಿ ಹಿಮ ರಾಶಿಯೇ ಎದುರಾಗಿತ್ತು. ಸಚಿನ್ ಗುಪ್ತಾ ಅವರು ಅಲ್ಲಿಯೇ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಮುಂದೆ ಹೋಗಲು ಸಾಧ್ಯವಾಗದೇ ಹಿಂತಿರುಗಲೂ ಆಗದೇ ಸುಸ್ತಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಫೋನ್ ಕರೆ ಮಾಡಿದ್ದರು. ಬಳಿಕ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳು ಸುಮೇರು ಪರ್ವತದ ತುದಿಯಿಂದ ಸಾಕಷ್ಟು ಪ್ರಯತ್ನ ನಡೆಸಿ ಸಚಿನ್ನನ್ನು ರಕ್ಷಿಸಿದ್ದರು. ಬಳಿಕ ಕೇದಾರನಾಥ ಧಾಮದಲ್ಲಿರುವ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಜೂನ್ ತಿಂಗಳ ಸಂದರ್ಭದಲ್ಲಿ ಕೇದಾರನಾಥ ಯಾತ್ರೆ ಕೈಗೊಂಡಿರುವ ಭಕ್ತರಿಗೆ ಅಲ್ಲಿನ ವಾತಾವರಣದಲ್ಲಿ ಬದಲಾವಣೆ ಆಗುತ್ತಿದ್ದರಿಂದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಅಧಿಕ ಜನಸಂದಣಿಯ ನಡುವೆ ಮಳೆ, ಭಾರಿ ಹಿಮಪಾತ ಸಂಭವಿಸುತ್ತಲೇ ಇರುವುದರಿಂದ ಪವಿತ್ರ ಯಾತ್ರೆಗೆ ಅಡ್ಡಿಯಾಗಿತ್ತು. ಹಾಗಾಗಿ ಜೂನ್ 10 ರವರೆಗೆ ಆಫ್‌ಲೈನ್ ಮತ್ತು ಆನ್‌ಲೈನ್ ನೋಂದಣಿಯನ್ನು ಸರ್ಕಾರ ಸ್ಥಗಿತಗೊಳಿಸಿತ್ತು. ಇದಕ್ಕೂ ಮುನ್ನ ಮೇ 25 ರವರೆಗೆ ಹೊಸ ನೋಂದಣಿಯನ್ನು ರದ್ದುಪಡಿಸಲಾಗಿತ್ತು.
ಇದನ್ನೂ ಓದಿ :ಸಹರಾನ್‌ಪುರದಲ್ಲಿ ಸೇನಾ ಕ್ಷಿಪಣಿ ಶೆಲ್ ಸ್ಫೋಟ, ಬಾಲಕ ಸಾವು