ನವದೆಹಲಿ:ಗಡಿಯಲ್ಲಿ ಯಥಾಸ್ಥಿತಿ ಬದಲಾವಣೆ ತಡೆಯುವಲ್ಲಿ ಭಾರತ ದೃಢವಾಗಿ ನಿಂತಿದ್ದು, ಈ ವಿಚಾರದಲ್ಲಿ ಯಾವುದೇ ಒತ್ತಡಕ್ಕೊಳಗಾಗುವುದಿಲ್ಲ ಎಂದು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಪೂರ್ವದಲ್ಲಿ ಚೀನಾದೊಂದಿಗಿನ ಲಡಾಕ್ ಗಡಿ ವಿಚಾರವಾಗಿ ಮಾತನಾಡಿರುವ ಅವರು, ಚೀನಾ ತಾಂತ್ರಿಕ ಲಾಭದ ಕಾರಣದಿಂದಾಗಿ ಉನ್ನತ ಸಶಸ್ತ್ರ ಪಡೆ ಹೊಂದಿರುವುದರಿಂದ ನಾವು ಹಿಂದೆ ಸರಿದುಕೊಳ್ಳುತ್ತೇವೆ ಎಂದು ಅಂದುಕೊಂಡಿರಬಹುದು. ಆದರೆ, ಅದು ಅಸಾಧ್ಯ ಎಂದು ತಿಳಿಸಿದರು.
ಭಾರತ ಉತ್ತರದ ಗಡಿಗಳಲ್ಲಿ ದೃಢವಾಗಿ ನಿಂತಿದ್ದು, ಯಾವುದೇ ಕಾರಣಕ್ಕೂ ಹಿಂದೆ ಸರಿದುಕೊಳ್ಳುವುದಿಲ್ಲ. ತಾಂತ್ರಿಕ ಲಾಭದಿಂದಾಗಿ ಭಾರತದ ಮೇಲೆ ಒತ್ತಡ ಹೇರಬಹುದು ಎಂದು ಅದು ಅಂದುಕೊಂಡಿದೆ ಎಂದು ತಿಳಿಸಿದ್ದಾರೆ. ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಮೂಲ ನಿಯಮವಿದೆ. ಅಂತಾರಾಷ್ಟ್ರೀಯ ಸಮುದಾಯ ಭಾರತದ ಬೆಂಬಲಿಕ್ಕಿದೆ ಎಂದು ರಾವತ್ ಹೇಳಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಪೂರ್ವ ಲಡಾಖ್ನಲ್ಲಿ ಭಾರತ - ಚೀನಾ ನಡುವೆ ಅ ನೇಕ ಘರ್ಷಣೆ ನಡೆದಿರುವುದರಿಂದ ಉಭಯ ದೇಶದ ಮಿಲಿಟರಿ ವಿಚಾರವಾಗಿ ದ್ವಿಪಕ್ಷೀಯ ಸಂಬಂಧ ಬಿಗಡಾಯಿಸಿದ್ದು, ಈಗಾಗಲೇ ಅನೇಕ ಸುತ್ತಿನ ಮಾತುಕತೆ ಸಹ ನಡೆದಿವೆ. ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಪರಿಣಾಮವಾಗಿ ಭಾರತ - ಚೀನಾ ಫೆಬ್ರವರಿ ತಿಂಗಳಲ್ಲಿ ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಮಿಲಿಟರಿ ಹಿಂತೆಗೆದುಕೊಂಡಿವೆ.