ನವದೆಹಲಿ:ಪಶ್ಚಿಮ ಏಷ್ಯಾದ ಸಂಘರ್ಷಗಳಿಂದ ಹೊಸ ಹೊಸ ಸವಾಲುಗಳು ಹೊರಹೊಮ್ಮುತ್ತಿವೆ. ಈ ಹಿನ್ನೆಲೆಯಲ್ಲಿ ಜಾಗತಿಕ ಒಳಿತಿಗಾಗಿ ಜಾಗತಿಕ ದಕ್ಷಿಣದ ದೇಶಗಳು ಒಗ್ಗಟ್ಟಿನ ಮಂತ್ರ ಜಪಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶುಕ್ರವಾರ ಭಾರತ ಆಯೋಜಿಸಿದ್ದ ವರ್ಚುಯಲ್ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಎರಡನೇ ಆವೃತ್ತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಮಾಸ್ ಮತ್ತು ಇಸ್ರೇಲ್ ಸಂಘರ್ಷದಲ್ಲಿ ಭಾರತದ ನಿಲುವು ಪುನರುಚ್ಚರಿಸಿದ ಪ್ರಧಾನಿ ಮೋದಿ, ಈ ಸಂಘರ್ಷದಿಂದ ಉದ್ಭವಿಸುವ ಪರಿಸ್ಥಿತಿ ನಿಭಾಯಿಸಲು ಭಾರತ, ಸಂಯಮದಿಂದ ಮಾತುಕತೆ ನಡೆಸಲು ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ಅನಾಗರಿಕ ಭಯೋತ್ಪಾದಕ ದಾಳಿಯನ್ನು ಭಾರತ ಒಪ್ಪುವುದಿಲ್ಲ. ಆದರೆ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.
ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಘಟನೆಗಳಿಂದ ಹೊಸ ಹೊಸ ಸವಾಲುಗಳು ಹೊರಹೊಮ್ಮುತ್ತಿರುವುದನ್ನು ನಾವೆಲ್ಲರೂ ಇತ್ತೀಚೆಗೆ ಗಮನಿಸುತ್ತಿದ್ದೇವೆ. ಭಾರತ ಇದರಲ್ಲಿ ಸಂಯಮವನ್ನೂ ಅನುಸರಿಸಿದೆ. ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದ್ದು, ಸಂಘರ್ಷದಲ್ಲಿ ಮಡಿದ ನಾಗರಿಕರ ಸಾವನ್ನು ಬಲವಾಗಿ ಖಂಡಿಸುತ್ತದೆ ಎಂದರು.