ನವದೆಹಲಿ:ಭಾರತ 2 ಬಿಲಿಯನ್ ಅಥವಾ 200 ಕೋಟಿ ಕೋವಿಡ್ ವ್ಯಾಕ್ಸಿನ್ ಡೋಸ್ ವಿತರಿಸಿ ದಾಖಲೆ ಸೃಷ್ಟಿಸಿದೆ. ಈ ಕುರಿತು ನಿನ್ನೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, "ಕೋವಿಡ್ ಮಹಾಮಾರಿಯನ್ನು ಹೊಡೆದೋಡಿಸಲು ದೇಶ ಪಣ ತೊಟ್ಟಿದ್ದು ಪ್ರತಿಯೊಬ್ಬ ನಾಗರಿಕನ ಪ್ರಯತ್ನದಿಂದ ಇದು ಸಾಧ್ಯವಾಗಿದೆ" ಎಂದು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕೇಂದ್ರ ಆರೋಗ್ಯ ಸಚಿವ ಮಾನ್ಸುಖ್ ಮಾಂಡವಿಯಾ ಪ್ರತಿಕ್ರಿಯಿಸಿ,"ಕೋವಿಡ್ ವ್ಯಾಕ್ಸಿನೇಷನ್ ವಿಚಾರದಲ್ಲಿ ಭಾರತ 2 ಬಿಲಿಯನ್ ಡೋಸ್ ಗಡಿ ದಾಟಿದೆ" ಎಂದು ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಶನಿವಾರದವರೆಗೆ ದೇಶವು 1.99 ಬಿಲಿಯನ್ ವ್ಯಾಕ್ಸಿನ್ ಡೋಸ್ ವಿತರಿಸಿದ್ದು ಈ ಪೈಕಿ, 1.01 ಬಿಲಿಯನ್ ಮೊದಲ ಡೋಸ್ ಹಾಗು 925 ಬಿಲಿಯನ್ 2ನೇ ಡೋಸ್ ಹಾಗು 56.23 ಮಿಲಿಯನ್ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ.
ಶನಿವಾರ ದೇಶದಲ್ಲಿ ಒದಗಿಸಲಾದ 2.5 ಮಿಲಿಯನ್ ವ್ಯಾಕ್ಸಿನ್ ಡೋಸ್‌ಗಳ ಪೈಕಿ 1,95,382 ಡೋಸ್‌ಗಳನ್ನು 12-14 ವಯೋಮಾನದವರಿಗೂ, 82,647 ಡೋಸ್‌ಗಳನ್ನು 17-18 ವಯೋಮಾನದವರಿಗೂ ಹಾಗು 1.66 ಮಿಲಿಯನ್ ಡೋಸ್‌ಗಳನ್ನು 18-59 ಹಾಗು ಮೇಲ್ಪಟ್ಟ ವಯಸ್ಸಿನವರಿಗೆ 2,52,272 ಡೋಸ್‌ಗಳನ್ನು ವಿತರಿಸಲಾಗಿದೆ.