ನವದೆಹಲಿ:ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ದೆಹಲಿ ವಿಶೇಷ ಕೋರ್ಟ್ ವಿಧಿಸಿರುವ ಜೀವಾವಧಿ ಶಿಕ್ಷೆ ಕುರಿತು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಮಾಡಿರುವ ಟೀಕೆ ಮತ್ತು ಕಾಮೆಂಟ್ಗಳಿಗೆ ಭಾರತ ಸರ್ಕಾರ ಶುಕ್ರವಾರ ತೀಕ್ಷ್ಣವಾಗಿ ಉತ್ತರ ನೀಡಿದೆ. ಅವರ ಹೇಳಿಕೆಗಳು ಆತನ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುವಂತಿವೆ ಎಂದು ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮಲಿಕ್ ಅವರ ಅಪರಾಧ ಮತ್ತು ಶಿಕ್ಷೆಯ ಕುರಿತು ಒಐಸಿ ಮಾಡಿರುವ ಟೀಕೆಗಳು ಸ್ವೀಕಾರಾರ್ಹವಲ್ಲ. ಜಗತ್ತು ಸಹಿಷ್ಣುತೆಯನ್ನು ಬಯಸುತ್ತಿದೆ. ಜೊತೆಗೆ ಇಂತಹ ಪ್ರಕರಣಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಬೇಡಿ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಗೆ ಅವರು ಒತ್ತಾಯಿಸಿದ್ದಾರೆ.
ಯಾಸಿನ್ ಮಲಿಕ್ ವಿರುದ್ಧ ಈಗಾಗಲೇ ಆರೋಪ ಸಾಬೀತಾಗಿದೆ. ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದೇಶ ವಿರೋಧಿ ಮತ್ತು ಭಯೋತ್ಪಾದನೆ, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಯಾಸಿನ್ ಮಲಿಕ್ ಅಪರಾಧಿ ಎಂದು ದೆಹಲಿ ವಿಶೇಷ ನ್ಯಾಯಾಲಯ ಇತ್ತೀಚೆಗೆ ಘೋಷಿಸಿತ್ತು. ಈ ಪ್ರಕರಣದಲ್ಲಿ ಮಲಿಕ್ ತಪ್ಪೊಪ್ಪಿಕೊಂಡಿದ್ದು, ಕಳೆದ ವಾರ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಅದಕ್ಕೂ ಮುನ್ನ ಮೇ 19 ರಂದು ಅಪರಾಧಿ ಎಂದು ಘೋಷಿಸಲ್ಪಟ್ಟ ಪ್ರತ್ಯೇಕತಾವಾದಿ ನಾಯಕನಿಗೆ ಮರಣದಂಡನೆ ವಿಧಿಸಲು NIA ಕೋರಿತ್ತು.
ಶಿಕ್ಷೆ ಖಂಡಿಸಿರುವ ಇಸ್ಲಾಮಿಕ್ ಸಹಕಾರ ಸಂಘಟನೆ, ಇದೊಂದು ಅಮಾನವೀಯ ಘಟನೆ. ಕಾಶ್ಮೀರಿ ಮುಸ್ಲೀಂರನ್ನು ಹತ್ತಿಕ್ಕುವ ಸಲುವಾಗಿ ಮಾಡಲಾಗಿರುವ ವ್ಯವಸ್ಥಿತ ಕುತಂತ್ರ. ಇದು ಭಾರತೀಯ ನ್ಯಾಯ ಮತ್ತು ನ್ಯಾಯಾಲಯವನ್ನು ಅಪಹಾಸ್ಯ ಮಾಡಿದಂತಾಗಿದೆ. ಅಲ್ಲದೆ, ಇದೊಂದು ಪ್ರಜಾಪ್ರಭುತ್ವದ ಹಕ್ಕುಗಳನ್ನು ಹತ್ತಿಕ್ಕುವ ಕೆಲಸವನ್ನು ಬಹಿರಂಗಪಡಿಸಿದಂತಾಗಿದೆ ಎಂದು ಟೀಕಿಸಿತ್ತು.
ಈ ವಿಷಯದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ, ಪ್ರತ್ರೇಕತಾವಾದಿಗಳನ್ನು ಬೆಂಬಲಿಸುವುದು ಪರೋಕ್ಷವಾಗಿ ಭಯೋತ್ಪಾದಕ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತೆ ಎಂದು ಎದಿರೇಟು ನೀಡಿದ್ದಾರೆ.