ಹೈದರಾಬಾದ್ :ದೇಶಾದ್ಯಂತ ಕೋವಿಡ್-19 ಸೋಂಕು ಹೆಚ್ಚುತ್ತಿದೆ. 18-45 ವರ್ಷ ವಯಸ್ಸಿನವರಿಗೂ ಲಸಿಕೆ ನೀಡುವಂತೆ ಇಂಡಿಯಾ ಇಂಕ್ ಸರ್ಕಾರವನ್ನು ಒತ್ತಾಯಿಸಿದೆ. ಈ ಕ್ರಮವು ನಾಗರಿಕರ ಜೀವ ಉಳಿಸುವುದಲ್ಲದೇ, ಭಾರತದ ಹೊಸ ಆರ್ಥಿಕ ಚೇತರಿಕೆ ಕಾಪಾಡುತ್ತದೆ ಎಂದು ಸಂಸ್ಥೆ ಹೇಳಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಬರೆದ ಪತ್ರದಲ್ಲಿ ಎಫ್‌ಐಸಿಸಿಐ ಅಧ್ಯಕ್ಷ ಉದಯ್ ಶಂಕರ್, "ಲಸಿಕೆಗಳ ಕೊರತೆಯಿಲ್ಲ ಮತ್ತು ಖಾಸಗಿ ವಲಯದ ಒಳಗೊಳ್ಳುವಿಕೆಯ ಮೂಲಕ ಲಸಿಕೆ ನೀಡುವ ಸಾಮರ್ಥ್ಯ ಹೆಚ್ಚಿಸುವ ದೊಡ್ಡ ಅವಕಾಶವಿದೆ.
ಹೀಗಾಗಿ, 18-45 ವರ್ಷದವರಿಗೂ ಲಸಿಕೆ ಪಡೆಯಲು ಅವಕಾಶ ಮಾಡಿಕೊಡಬೇಕು. ಇದು ಸೋಂಕಿನ ಹರಡುವಿಕೆ ಮತ್ತು ದೇಶದಲ್ಲಿನ ಪ್ರಕರಣಗಳ ತೀವ್ರತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ." ಎಂದು ಬರೆದಿದ್ದಾರೆ. ಕೊರೊನಾ ಪರೀಕ್ಷಾ ಸಾಮರ್ಥ್ಯ ಸಾಧಿಸಲು ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಶಂಕರ್ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ.
"ನಾವು ಪ್ರಸ್ತುತ ದಿನಕ್ಕೆ ಸುಮಾರು 11 ಲಕ್ಷ ಮಾದರಿ ಪರೀಕ್ಷಿಸುತ್ತಿದ್ದೇವೆ. ಜನವರಿಯಲ್ಲಿ ನಾವು ದಿನಕ್ಕೆ 15 ಲಕ್ಷ ಮಾದರಿ ಪರೀಕ್ಷಿಸುವ ಮಟ್ಟ ಕೂಡ ತಲುಪಿದ್ದೆವು. 1,200 ಖಾಸಗಿ ಲ್ಯಾಬ್ ಸೇರಿ ಕೋವಿಡ್ ಪರೀಕ್ಷೆಗಾಗಿ ಕಾರ್ಯನಿರ್ವಹಿಸುತ್ತಿರುವ ದೇಶದ 2,440 ಲ್ಯಾಬ್‌ಗಳೊಂದಿಗೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವಿದೆ" ಎಂದು ಅವರು ಹೇಳಿದರು.
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್‌ಎಡಿಎ) ಕೂಡ ವ್ಯಾಕ್ಸಿನೇಷನ್ ಕಾರ್ಯವನ್ನು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. "ಕೋವಿಡ್-19 ಪ್ರಕರಣ ಹೆಚ್ಚಾಗುತ್ತಿರುವುದರಿಂದ ಎಲ್ಲರಲ್ಲೂ ಭಯವಿದೆ. 18-45 ವಯೋಮಾನದವರಿಗೆ ವ್ಯಾಕ್ಸಿನೇಷನ್ ವಿಸ್ತರಿಸುವುದು ಬಹಳ ಮುಖ್ಯ.
ಯಾಕೆಂದರೆ, ಭಾರತವು ಸರಾಸರಿ ವಯಸ್ಸಿನ ದೃಷ್ಟಿಯಿಂದ ಯುವ ದೇಶವಾಗಿದೆ ಮತ್ತು ನಮ್ಮ ದೇಶದದಲ್ಲಿ ಶೇ.70ಕ್ಕಿಂತ ಹೆಚ್ಚು ಉದ್ಯೋಗಿಗಳು ಈ ವಯಸ್ಸಿನ ವ್ಯಾಪ್ತಿಯಲ್ಲಿದ್ದಾರೆ" ಎಂದು ಎಫ್‌ಎಡಿಎ ಅಧ್ಯಕ್ಷ ವಿಂಕೇಶ್ ಗುಲಾಟಿ ತಿಳಿಸಿದ್ದಾರೆ.
ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರು ಎಂದು ಸರ್ಕಾರ ಘೋಷಿಸಿದೆ. ಈ ಮೊದಲು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಕೊಮೊರ್ಬಿಡಿಟಿ ಹೊಂದಿರುವ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ -19 ಲಸಿಕೆ ನೀಡಲು ಅವಕಾಶವಿತ್ತು. ಇತ್ತೀಚಿಗೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ಲಸಿಕೆ ಪಡೆಯಲು ಹಿಂಜರಿಕೆ ಕಡಿಮೆಯಾಗುತ್ತಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿವೆ.
"ಕೋವಿಡ್-19 ಲಸಿಕೆ ತೆಗೆದುಕೊಳ್ಳಲು ಸಿದ್ಧರಿರುವ ನಾಗರಿಕರ ಶೇಕಡಾವಾರು ಪ್ರಮಾಣವು ಜನವರಿ ಎರಡನೇ ವಾರದಲ್ಲಿ 38% ಇದ್ದು, ಇದೀಗ ಈಗ 77%ಕ್ಕೆ ಏರಿದೆ" ಎಂದು ಲೋಕಲ್ ಸರ್ಕಲ್ಸ್ ತನ್ನ ಇತ್ತೀಚಿನ ಹೇಳಿಕೆಯಲ್ಲಿ ತಿಳಿಸಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಒಲವು ತೋರುತ್ತಿದ್ದಾರೆ. ಜನರು ಇದಕ್ಕಾಗಿ ಪ್ರೀಮಿಯಂ ಪಾವತಿಸಲು ಸಹ ಸಿದ್ಧರಾಗಿದ್ದಾರೆ.